ತಿರುವನಂತಪುರಂ, ಡಿ 18 (Daijiworld News/PY) : ಕೇರಳದ ವೃದ್ಧ ಜೋಡಿಯೊಂದು ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎಂಬ ಮಾತನ್ನು ನಿಜ ಮಾಡಲು ಹೊರಟಿದೆ.
65 ವರ್ಷದ ಲಕ್ಷ್ಮಿ ಅಮ್ಮಾಲ್ ಹಾಗೂ 66 ವರ್ಷದ ಕೋಚಿಯಾನ್ ಸಪ್ತಪದಿ ತುಳಿಯಲು ತಯಾರಾಗಿದ್ದಾರೆ. ಕೋಚಿಯಾನ್ ಹಾಗೂ ಲಕ್ಷ್ಮಿ ಅಮ್ಮಾಲ್ ಅವರದ್ದು ಸುಮಾರು 20 ವರ್ಷಗಳ ಪರಿಚಯ. 22 ವರ್ಷಗಳ ಹಿಂದೆ ಲಕ್ಷ್ಮಿ ಅಮ್ಮಾಲ್ ಅವರ ಪತಿ ಜಿ ಕೆ ಕೃಷ್ಣ ಅಯ್ಯರ್ ನಿಧನರಾಗಿದ್ದರು. ಪತಿಯ ನಿಧನದ ನಂತರ ಲಕ್ಷ್ಮಿ ಅಮ್ಮಾಲ್ ಅವರು ವೃದ್ದಾಶ್ರಮಕ್ಕೆ ತೆರಳಿದ್ದರು. ಈ ವೇಳೆ ಲಕ್ಷ್ಮಿ ಅವರ ಪತಿಯ ಜೊತೆ ಕೋಚಿಯಾನ್ ಕೆಲಸ ನಿರ್ವಹಿಸುತ್ತಿದ್ದರು. ಲಕ್ಷ್ಮಿ ಪತಿ ನಿಧನರಾಗುವ ಮುನ್ನ ಎಂದಿಗೂ ನಾನು ಲಕ್ಷ್ಮಿ ಜೊತೆ ಇರುವುದಾಗಿ ಕೋಚಿಯಾನ್ ಮಾತು ಕೊಟ್ಟಿದ್ದರು. ಹಾಗಾಗಿ ಅವರಿಗೆ ನೀಡಿದ ಮಾತಿನ ಪ್ರಕಾರ ಇಂದಿಗೂ ಕೋಚಿಯಾನ್ ಲಕ್ಷ್ಮಿ ಅವರ ಜೊತೆಯೇ ಇದ್ದಾರೆ. ಅದಲ್ಲದೇ ವಿವಾಹದ ತಯಾರಿಯಲ್ಲಿರುವ ಈ ವೃದ್ಧ ಜೋಡಿಗಳಿಗೆ ವೃದ್ದಾಶ್ರಮದ ಸಿಬ್ಬಂದಿಯೇ ವಿವಾಹ ಮಾಡಿಸಲು ನಿರ್ಧರಿಸಿದ್ದಾರೆ.
ಮೊದಲು ವೃದ್ಧಾಶ್ರಮದಲ್ಲಿ ಪರಿಚಯವಾಗಿದ್ದ ಈ ವೃದ್ದರು ನಂತರ ಸ್ನೇಹಿತರಾಗಿದ್ದಾರೆ. ಇವರ ಸ್ನೇಹ ಪ್ರೀತಿಗೆ ತಿರುಗಿದ್ದು, ವೃದ್ದಾಶ್ರಮದ ಅಧೀಕ್ಷಕರಾದ ವಿಜಿ ಜಯಾಕುಮಾರ್ ಜೋಕಿ ಇವರಿಬ್ಬರ ವಿವಾಹ ಮಾಡಲು ನಿರ್ಧರಿಸಿದ್ದು, ಡಿ.3೦ರಂದು ಇಬ್ಬರ ಮದುವೆ ನಡೆಯಲಿದೆ.