ನವವದೆಹಲಿ, ಡಿ 18 (Daijiworld News/PY) : 2012 ರ ಡಿಸೆಂಬರ್ 16 ರಂದು 23 ವರ್ಷದ ಅರೆವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತಹ ಆರೋಪಿಗಳಿಗೆ ಶೀಘ್ರವೇ ಗಲ್ಲುಶಿಕ್ಷೆ ನೀಡಬೇಕಾಗಿ ನಿರ್ಭಯಾ ತಾಯಿ ಆಶಾದೇವಿ ಮನವಿ ಮಾಡಿಕೊಂಡಿದ್ಧಾರೆ. ಆದರೆ ಆಶಾ ದೇವಿ ಸಲ್ಲಿಸಿದ ಅರ್ಜಿಯ ಪರಿಶೀಲನೆಯನ್ನು ಪಟಿಯಾಲಾ ಹೌಸ್ ಕೋರ್ಟ್ 2020ರ ಜನವರಿ 7 ಕ್ಕೆ ಮುಂದೂಡಿದೆ.
ಮಗಳ ಕೊಲೆ ನಡೆದು ಏಳು ವರ್ಷವಾದರೂ ಇನ್ನೂ ನ್ಯಾಯ ದೊರಕಿಲ್ಲ, ನ್ಯಾಯಕ್ಕಾಗಿ ಇನ್ನೆಷ್ಟು ದಿನ ಕಾಯಬೇಕು ಎಂದು ಆಶಾದೇವಿ ಕೋರ್ಟ್ನ ಹಾಲ್ ನೊಳಗೆ ಕಣ್ಣೀರು ಹಾಕಿದ್ದಾರೆ. ಮಗಳ ಸಾವಿನ ನ್ಯಾಯಕ್ಕಾಗಿ ಏಳು ವರ್ಷಗಳಿಂದ ಕಾನೂನು ಹೋರಾಟ ಮಾಡುತ್ತಿದ್ದೇನೆ, ನಮ್ಮ ಹಕ್ಕುಗಳಿಗೆ ಅರ್ಥವಿಲ್ಲವೇ ಎಂದು ಹೇಳುತ್ತಾ ಕುಸಿದು ಬಿದ್ದಿದ್ದಾರೆ ಎಂದು ವರದಿ ತಿಳಿಸಿದೆ.
ನಿರ್ಭಯಾ ತಾಯಿಗೆ ಸಾಂತ್ವಾನ ಹೇಳಿದ ಪಟಿಯಾಲಾ ಹೌಸ್ ಕೋರ್ಟ್ ನ್ಯಾಯಾಧೀಶರು, ನಮಗೂ ನಿಮ್ಮ ಮೇಲೆ ಅನುಕಂಪವಿದೆ, ಅದರ ಜೊತೆ ಕಾನೂನಿನ ರೀತಿ ನೀತಿಗಳನ್ನು ಅನುಸರಿಸಬೇಕಾಗುತ್ತದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ನೋಟೀಸ್ ಜಾರಿಗೊಳಿಸಬೇಕು ಎಂದರು.
ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಿಗೆ ಪಟಿಯಾಲಾ ಹೌಸ್ ಕೋರ್ಟ್ ಕ್ಷಮಾದಾನ ಅರ್ಜಿ ಸಲ್ಲಿಸಲು ಒಂದು ವಾರಗಳ ಕಾಲಾವಕಾಶ ನೀಡಿದೆ.
ನಿರ್ಭಯಾ ತಾಯಿ ಆಶಾ ದೇವಿ ನೀಡಿದ್ದ ಅರ್ಜಿಯನ್ನು ಪರಿಶೀಲಿಸಿದ ಪಟಿಯಾಲ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾ.ಸತೀಶ್ ಕುಮಾರ್ ಅರೋರಾ ವಿಚಾರಣೆ ನಡೆಸಿದ್ಧಾರೆ. ಈ ಸಂದರ್ಭ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್, ನಾಲ್ವರು ಅಪರಾಧಿಗಳ ಪೈಕಿ ಕೇವಲ ಇಬ್ಬರು ಕ್ಷಮದಾನಕ್ಕೆ ಅರ್ಜಿ ಸಲ್ಲಿಸಲಿದ್ದಾರೆ, ಇನ್ನಿಬ್ಬರು ನಿರಾಕರಿಸಿದ್ದಾರೆ ಎಂಬ ಮಾಹಿತಿ ನೀಡಿದರು. ವಾದಗಳನ್ನು ಆಲಿಸಿದ ಪೀಠ ತಪ್ಪಿತಸ್ಥರಿಗೆ ಹೊಸ ನೋಟಿಸ್ ನೀಡುವಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು ನಿರ್ಭಯಾ ಪ್ರಕರಣದ ಸಂಬಂಧಿಸಿ ಜನವರಿ ಏಳಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದ್ದಾರೆ.