ಬೆಂಗಳೂರು, ಡಿ 19 (Daijiworld News/MB): ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದಲ್ಲಿ ರೈತರ ಸುಮಾರು 46 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದಕ್ಕಾಗಿ ಉತ್ತರ ಕರ್ನಾಟಕದ ರೈತನೊಬ್ಬ ಕುಮಾರಸ್ವಾಮಿಯವರಿಗೆ ಉಡುಗೊರೆಯನ್ನು ನೀಡಿದ್ದಾರೆ.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಧಾರವಾಡ ಜಿಲ್ಲೆ ಹುಬ್ಬಳಿ ತಾಲೂಕಿನ ಕಿರೇಸೂರ ಗ್ರಾಮದ ಗೋವಿಂದಪ್ಪ ಶ್ರೀ ಹರಿ ಎಂಬ ರೈತ ಸಾಲದಿಂದ ಮುಳುಗಿದ್ದು ಈ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡುವುದಾಗಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದ.
ರೈತನ ಆ ಪತ್ರ ನೋಡದ ಕುಮಾರಸ್ವಾಮಿ ಆ ಕೂಡಲೇ ಆ ಪತ್ರದಲ್ಲಿದ್ದ ಫೋನ್ ನಂಬರ್ಗೆ ಕರೆ ಮಾಡಿ ಆತ್ಮಹತ್ಯೆಯ ನಿರ್ಧಾರ ಮಾಡಬೇಡಿ, ಸಾಲ ಮನ್ನಾ ಮಾಡುವುದಾಗಿ ಸಾಂತ್ವನ ಹೇಳಿದ್ದರು. ನಂತರ ಸಾಲಮನ್ನಾ ಕೂಡಾ ಆಗಿತ್ತು.
ಆ ನಂತರ ಕುಮಾರ ಸ್ವಾಮಿ ತನ್ನ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದರು. ಸಾಲ ಮನ್ನಾ ಆದ ರೈತ ಗೋವಿಂದಪ್ಪ ಶ್ರೀ ಹರಿ ತನ್ನ ಹೊಲದಲ್ಲಿ ಜೋಳಾ, ಶೇಂಗಾ ಬೆಳೆದಿದ್ದು ಕುಮಾರಸ್ವಾಮಿಯವರು ಸಾಲ ಮನ್ನಾ ಮಾಡಿದಕ್ಕಾಗಿ ಹಾಗೂ ಆತ್ಮಹತ್ಯೆ ಮಾಡದಂತೆ ತಿಳಿಸಿದಕ್ಕಾಗಿ ಪ್ರತಿಯಾಗಿ ಅವರಿಗೆ ಉಡುಗೊರೆಯಾಗಿ ತಮ್ಮ ಹೊಲದಲ್ಲೆ ಬೆಳೆದ ಜೋಳದರೊಟ್ಟಿ, ಶೇಂಗಾ ಚಟ್ನಿಪುಡಿ, ಡ್ರೈ ಪಲ್ಯಾ ಮಾಡಿ ಬಾಕ್ಸ್ ಒಂದರಲ್ಲಿ ಹಾಕಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೆಪಿ ನಗರ ನಿವಾಸಕ್ಕೆ ಕೊರಿಯರ್ ಮಾಡಿದ್ದಾರೆ. ಹಾಗೆಯೇ ಅದರಲ್ಲಿ ಕೃತಜ್ಷತೆ ಪತ್ರವನ್ನು ಕೂಡಾ ಇರಿಸಿದ್ದಾರೆ.
ಭದ್ರತಾ ಸಿಬ್ಬಂದಿಗಳು ಈ ಉಡುಗೊರೆ ಬಾಕ್ಸ್ನ್ನು ಪರಿಶೀಲನೆ ನಡೆಸಿದ ಬಳಿಕ ಈ ವಿಷಯವನ್ನು ಕುಮಾರಸ್ವಾಮಿ ಅವರಿಗೆ ತಿಳಿಸಿದ್ದು ಇದರಿಂದ ಭಾವುಕಗೊಂಡ ಕುಮಾರಸ್ವಾಮಿ ಅವರು "ಶ್ರೀಹರಿಯಂತಹ ರೈತರೇ ತನ್ನ ರಾಜಕೀಯ ಜೀವನಕ್ಕೆ ಸ್ಪೂರ್ತಿ" ಎಂದು ಹೇಳಿದ್ದಾರೆ.