ಬೆಂಗಳೂರು , ಡಿ 19 (Daijiworld News/PY) : ಕೇಂದ್ರ ಸರ್ಕಾರವು ಹೊಸದಾಗಿ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ವಿವಿಧ ರಾಜಕೀಯ ಸಂಘಟನೆಗಳು ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದಾರೆ. ಪ್ರತಿಭಟನೆಯ ನಡೆಯುವ ವೇಳೆ ಯಾವುದೇ ತೊಂದರೆಯಾಗದಂತೆ ರಾಜ್ಯಾದ್ಯಂತ ಸೆಕ್ಷನ್ 144ರ ಅಡಿ ಡಿ 21ರವರೆಗೆ ನಿಷೇದಾಜ್ಞೆ ಜಾರಿಗೊಳಿಸಿದೆ.
ನಿಷೇಧಾಜ್ಞೆ ಇದ್ದರೂ ಶಾಲಾ ಕಾಲೇಜುಗಳು ಎಂದಿನಂತೆಯೇ ಕಾರ್ಯನಿರ್ವಹಿಸಲಿವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.ಇನ್ನೊಂದೆಡೆ ಕಲಬುರ್ಗಿಯಲ್ಲಿ ಬಂದ್ ಹಿನ್ನೆಲೆಯಲ್ಲಿ ಎಡ ಪಂಥಿಯರು ಹಾಗೂ ಮುಸ್ಲಿಂ ಸಂಘಟನೆ ಪ್ರತಿಭಟನೆಯ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಕಲಬುರ್ಗಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.
ನಿಷೇಧಾಜ್ಞೆ ಜಾರಿಗೊಳಿಸಿದ ವೇಳೆಯಲ್ಲಿ ಯಾವುದೇ ಸಮಾರಂಭ, ವಿಜಯೋತ್ಸವ, ಪ್ರತಿಭಟನೆ, ಜಾಥಾ, ರಾಜಕೀಯ ಸಭೆ ಅಥವಾ ಜನರು ಒಂದೆಡೆ ಗುಂಪು ಸೇರಿರುವುದನ್ನು ನಿಷೇಧಿಸಲಾಗಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್ ರಾಜು ಹಾಗೂ ಇತರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಯಾವುದೇ ಅಹಿತಕರ ನಡೆಯದಂತೆ ಎಚ್ಚರ ವಹಿಸಲು ಸೂಚನೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು, ಡಿ 19 ರಿಂದ 21ರ ವರೆಗೆ ಪ್ರತಿಭಟನೆಗೆ ಕರೆನೀಡಿದೆ. ಈ ವೇಳೆ ಯಾವುದೇ ಅಹಿತಕರ ನಡೆಯಬಾರದೆಂಬ ಉದ್ದೇಶದಿಂದ ಇಂತಹ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕಾನೂನು ವ್ಯವಸ್ಥೆಗೆ ದಕ್ಕೆ ಬರುವ ಉದ್ದೇಶದಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ನೀಡಲು ಅವಕಾಶ ನೀಡಿಲ್ಲ, ನೀವು ಉತ್ತರ ಭಾರತ ಭಾಗದಲ್ಲಿ ನಡೆಯುವ ಪ್ರತಿಭಟನೆಗೆ ಬೆಂಬಲ ಮಾಡುವುದೇ ಆದರೆ ಅಲ್ಲಿಗೇ ಹೋಗಿ ಪ್ರತಿಭಟನೆ ನಡೆಸಿ ಎಂದಿದ್ಧಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಡೆಯಲಿರುವ ಪ್ರತಿಭಟನೆಯ ನಡೆಯುವುದರಿಂದ ರಾಯಚೂರಿನಲ್ಲಿಯೂ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.