ದ್ವಾರಕಾ, ಡಿ 19(Daijiworld News/MSP): "ಅಲ್ಪಸಂಖ್ಯಾತ ಮುಸ್ಲಿಮರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ತಾರತಮ್ಯವಾಗಲಿದೆ " ಎಂದು ಪೌರತ್ವ ಕಾಯ್ದೆ ವಿರುದ್ದ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ ಪ್ರತಿಭಟನೆಗಳ ಮಧ್ಯೆ, ಗುಜರಾತ್ನ ದ್ವಾರಕಾದಲ್ಲಿ ಹಸೀನಾ ಬೆನ್ ಎಂಬ ಪಾಕಿಸ್ತಾನಿ ಮುಸ್ಲಿಂ ಮಹಿಳೆಗೆ ಭಾರತೀಯ ಪೌರತ್ವ ನೀಡಲಾಗಿದೆ.
ಭಾರತದ ಪೌರತ್ವ ನೀಡುವಂತೆ ಹಸೀನಾಬಾನು ಅಬ್ಬಾಸ್ ಅಲಿ ಎಂಬ ಮುಸ್ಲಿಂ ಮಹಿಳೆ ಗುಜರಾತ್ ರಾಜ್ಯದ ದ್ವಾರಕಾದ ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಡಿ 18 ರಂದು ಬುಧವಾರದಂದು ಜಿಲ್ಲಾಧಿಕಾರಿ ಹಸೀನಾಬಾನು ಅವರಿಗೆ ಭಾರತದ ಪೌರತ್ವದ ಪ್ರಮಾಣಪತ್ರ ಹಸ್ತಾಂತರಿಸಿದರು.
'ಅರ್ಜಿ ಸಲ್ಲಿಸಿದ್ದ ಹಸೀನಾಬಾನು ಅಬ್ಬಾಸ್ ಅಲಿ ವರ್ಸಾರಿಯಾ ಅವರಿಗೆ ಭಾರತದ ಪೌರತ್ವವನ್ನು ಇಂದು ನೀಡಲಾಯಿತು' ಎಂದು ಆ ಬಳಿಕ ದ್ವಾರಕಾದ ಜಿಲ್ಲಾಧಿಕಾರಿ ಟ್ವೀಟ್ ಮಾಡಿದ್ದಾರೆ. ಎಲ್ಲರಿಗೂ ಅನ್ವಯವಾಗುವ ಸಾಮಾನ್ಯ ಪ್ರಕ್ರಿಯೆ ಮೂಲಕವೇ ಹಸೀನಾ ಬಾನು ಅವರಿಗೆ ಪೌರತ್ವ ನೀಡಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ನರೇಂದ್ರ ಕುಮಾರ್ ಮೀನಾ ತಿಳಿಸಿದರು.
ಭಾರತದ ನಿವಾಸಿಯಾಗಿದ್ದ ಹಸೀನಾ 1999ರಲ್ಲಿ ಪಾಕಿಸ್ತಾನಿಯನ್ನು ವಿವಾಹವಾಗಿ ಅದೇ ದೇಶಕ್ಕೆ ವಲಸೆ ಹೋಗಿ ಪಾಕ್ ಪ್ರಜೆಯಾಗಿ ವಾಸಿಸುತ್ತಿದ್ದಳು. ಆದರೆ ಪತಿ ತೀರಿಕೊಂಡ ನಂತರ ಹಸೀನಾ ಮತ್ತೆ ಭಾರತಕ್ಕೆ ಹಿಂತಿರುಗಿ ಕೆಲವು ವರ್ಷಗಳನ್ನು ಭಾರತದಲ್ಲಿ ಕಳೆದ ಬಳಿಕ ಅವರಿಗೆ ಇಲ್ಲಿನ ಪೌರತ್ವ ನೀಡಲಾಗಿದೆ.