ನಾಗಪುರ, ಡಿ 19 (Daijiworld News/MB) : ಈ ದೇಶದ ಜನರು ಶಾಂತಿ ನೆಮ್ಮದಿಯಿಂದ ಬದುಕ ಬೇಕಾದರೆ ಈ ದೇಶವನ್ನು ಕಾಪಾಡಲು ಬಿಜೆಪಿಗೆ ಪರ್ಯಾಯವಾದ ಶಕ್ತಿಯನ್ನು ಕಟ್ಟಬೇಕಾದ ಅನಿವಾರ್ಯತೆ ಇದೆ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧವಾಗಿ ಭುಗಿಲೆದ್ದ ಆಕ್ರೋಶದ ಹಿನ್ನಲೆಯಲ್ಲಿ ಮಾತನಾಡಿದ ಅವರು, "ಬಿಜೆಪಿಯನ್ನು ದೇಶದ ಜನರು ವಿರೋಧ ಮಾಡುತ್ತಿದ್ದಾರೆ ಎಂಬ ಸೂಚನೆ ನಡೆಯುತ್ತಿರುವ ಪ್ರತಿಭಟನೆಗಳಿಂದ ತಿಳಿದು ಬರುತ್ತದೆ. ಜನರು ನೆಮ್ಮದಿ ಶಾಂತಿಯಿಂದ ಬದುಕಬೇಕಾದರೆ ಬಿಜೆಪಿಗೆ ಪಯಾರ್ಯವಾದ ಶಕ್ತಿ ಕಟ್ಟಲೇ ಬೇಕಾಗಿದೆ ಎಂದು ತಿಳಿಸಿದ್ದಾರೆ.
ಕೆಲವು ರಾಜ್ಯಗಳು ಮಾತ್ರ ಈ ಕಾಯ್ದೆಗೆ ವಿರೋಧ ವ್ಯಕ್ತಪಡಿಸ ಬಹುದು ಎಂದು ಬಿಜೆಪಿ ತಿಳಿದಿತ್ತು. ಆದರೆ ಈಗ ದೇಶದ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಬಿಜೆಪಿಯ ಆಡಳಿತ ಇರುವ ಅಸ್ಸಾಂನಲ್ಲೇ ಜನರು ಈ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವಿವರಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸರಕಾರ ಎಷ್ಟು ಜನರನ್ನು ಜೈಲಿನಲ್ಲಿಡಲು ಸಾಧ್ಯ? ಎಷ್ಟು ದಿನಗಳ ಕಾಲ ಬಂಧಿಸಲು ಸಾಧ್ಯ? ಎಂದು ಪ್ರಶ್ನಿಸಿದರು.
ಈ ಕಾಯ್ದೆಯ ಕುರಿತು ರಾಷ್ಟ್ರಪತಿ ಕೋವಿಂದ್ ಅವರನ್ನು ಭೇಟಿ ಮಾಡಿ ಬಿಜೆಪಿ ಹೊರತು ಪಡಿಸಿ ಇತರೆ ಪಕ್ಷಗಳ ಒಕ್ಕೂಟ ಚರ್ಚಿಸಲಿದೆ ಎಂದು ಅವರು ತಿಳಿಸಿದ್ದಾರೆ.