ಪಂಜಾಬ್, ಡಿ 19(Daijiworld News/MSP): ತಾನು ಪ್ರೀತಿಸಿದ ಯುವಕನ ಮದುವೆ ನಿಲ್ಲಿಸಲೆಂದು ಯುವತಿಯೋರ್ವಳು ಸಂಬಂಧಿಯ ಅಂಬೆಗಾಲಿಡುವ ಎರಡು ವರ್ಷದ ಮಗುವನ್ನು ವಾಷಿಂಗ್ ಮಿಷಿನ್ ಹಾಕಿ ಕೊಲೆ ಮಾಡಿದ ಭೀಬತ್ಸ ಘಟನೆ ಪಂಜಾಬ್ ನ ಕಪುರ್ಥಾಲಾ ಜಿಲ್ಲೆಯಲ್ಲಿ ನಡೆದಿದೆ. ಕೃತ್ಯವೆಸಗಿದ ಆರೋಪಿ ಮನ್ಪ್ರೀತ್ ಕೌರ್ನನ್ನು ಬಂಧಿಸಲಾಗಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಕೊಟ್ವಾಲಿ ಪೊಲೀಸ್ ಠಾಣಾಧಿಕಾರಿ ಸತ್ಪಾಲ್ ಸಿಂಗ್ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಮನ್ಪ್ರೀತ್ ಕೌರ್ ಹತ್ಯೆ ಮಾಡಿದ ಮಗುವಿನ ಮಾವನೊಂದಿಗೆ ಸಂಬಂಧ ಹೊಂದಿದ್ದು ಆದರೆ ಆತ ಬೇರೊಬ್ಬ ಯುವತಿಯೊಂದಿಗೆ ಭಾನುವಾರದಂದು ಹಸೆಮಣೆ ಏರಲು ಸಿದ್ಧವಾಗಿದ್ದ. ಇದನ್ನು ಸಹಿಸದ ನೆರೆಕರೆಯಲ್ಲೇ ವಾಸಿಸುತ್ತಿದ್ದ ಕೌರ್ ಮದುವೆ ನಿಲ್ಲಿಸಲು ಸಂಚು ಹೂಡಿದ್ದಳು. ಇದೇ ವಿವಾಹಕ್ಕೆ ಹಾಜರಾಗಲು ನಾಲ್ಕು ವರ್ಷದ ಹಾಗೂ ಎರಡು ವರ್ಷದ ಮಗು ಅಧಿರಾಜ್ ನೊಂದಿಗೆ ಸಂಬಂಧಿ ಮಹಿಳೆಯೊಬ್ಬಳು ಬಂದಿದ್ದಳು.
"ತನ್ನ ಪ್ರೇಮಿಯ ಬೇರೊಬ್ಬರನ್ನು ಮದುವೆಯಾಗುತ್ತಾನೆ ಎಂಬ ಆಲೋಚನೆಯನ್ನು ಸಹಿಸಲಾಗದೆ ಆತನ ವಿವಾಹವನ್ನು ಮುಂದೂಡಲು ಹತಾಶ ಪ್ರಯತ್ನದಲ್ಲಿ ಕೌರ್ ಮಗುವನ್ನು ವಾಷಿಂಗ್ ಮೆಷಿನ್ ಗೆ ಹಾಕಿ ಹತ್ಯೆ ಮಾಡಿದ್ದಾಳೆ" ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಆಟವಾಡುತ್ತಿದ್ದ ಬಾಲಕ ಅಧಿರಾಜ್ ನಾಪತ್ತೆಯಾಗಿದ್ದು ತೀವ್ರ ಹುಡುಕಾಟದ ಬಳಿಕವೂ ಪತ್ತೆಯಾಗದಾಗ ಕುಟುಂಬಸ್ಥರು ಪೊಲೀಸರನ್ನು ಸಂಪರ್ಕಿಸಿದರು. ಈ ವೇಳೆ ಪೊಲೀಸರು ಆ ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮೆರಾದ ತುಣುಕಿನ ಆಧಾರದ ಮೇಲೆ ಸುಳಿವು ದೊರಕಿ ಹುಡುಕಾಟ ನಡೆಸಿದಾಗ ಸತ್ಯ ಬಯಲಾಗಿದೆ.
"ಸಹೋದರ ಮತ್ತು ನೆರೆಹೊರೆಯ ಇನ್ನೊಬ್ಬ ಬಾಲಕಿಯಿಂದಿಗೆ ಆಟವಾಡುತ್ತಾ ಮಂಗಳವಾರ ಮಧ್ಯಾಹ್ನ ಬಾಲಕ ಅಧಿರಾಜ್ ಮನಪ್ರೀತ್ ಕೌರ್ ಮನೆಗೆ ಬಂದಿದ್ದರು. ಆದರೆ ಆ ಬಳಿಕ ಅಲ್ಲಿಂದ ಇಬ್ಬರೇ ಹಿಂತಿರುಗಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆರೋಪಿ ಯುವತಿಯ ಮನೆಯಲ್ಲಿದ್ದ ವಾಷಿಂಗ್ ಮಿಷಿನ್ ನ ಒಳಗೆ ಚಲನೆ ಇಲ್ಲದ ಸ್ಥಿತಿಯಲ್ಲಿ ಕಂಡುಬಂದಿತ್ತು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಗು ಆದಾಗಲೇ ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದ್ದಾರೆ. ಕೃತ್ಯವೆಸಗಿದ ಮನ್ಪ್ರೀತ್ ಕೌರ್ನನ್ನು ಬಂಧಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.