ಕಾನ್ಪುರ, ಡಿ 19 (Daijiworld News/PY) : ಅಟಲ್ ಘಾಟ್ನ ಮೆಟ್ಟಿಲುಗಳನ್ನು ಏರುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಎಡವಿ ಬಿದ್ದ ಘಟನೆಯ ನಂತರ ಮೆಟ್ಟಿಲುಗಳನ್ನು ದುರಸ್ತಿಪಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಕಳೆದ ವಾರ ನಮಾಮಿ ಗಂಗಾ ಯೋಜನೆ ಚರ್ಚೆ ನಂತರ ಈ ಯೋಜನೆಯ ಅನುಷ್ಠಾನದ ಪ್ರಗತಿ ಪರಿಶೀಲಿಸಲು ಅಟಲ್ ಘಾಟ್'ಗೆ ಬಂದಿದ್ದ ಪ್ರಧಾನಿ ಮೋದಿ ಮೆಟ್ಟಿಲು ಹತ್ತುವ ವೇಳೆ ಮುಗ್ಗರಿಸಿ ಬಿದ್ದಿದ್ದರು. ಈ ವೇಳೆ ಅವರ ಭದ್ರತಾ ಸಿಬ್ಬಂದಿ ನೆರವಿಗೆ ಬಂದು ಮೋದಿಯವರನ್ನು ಹಿಡಿದು ಎತ್ತಿದ್ದರು.
ಈ ಘಟನೆಯ ಬಳಿಕ ಅಟಲ್ ಘಾಟ್ನ ಮೆಟ್ಟಿಲುಗಳ ಎತ್ತರವು ಒಂದೇ ಸಮನಾಗಿಲ್ಲ, ಇಲ್ಲಿಗೆ ಬರುವ ಪ್ರವಾಸಿಗಳಿಗೂ ಕೂಡಾ ಹಲವರೂ ಬಾರಿ ಎಡವಿ ಬಿದ್ದಿದ್ದರು. ಹೀಗಾಗಿ ಶೀಘ್ರವೇ ಎಲ್ಲಾ ಮೆಟ್ಟಿಲುಗಳನ್ನು ಸರಿಪಡಿಸಲು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುತ್ತೇವೆ ಎಂದು ವಿಭಾಗೀಯ ಅಧಿಕಾರಿ ಸುಧೀರ್ ಎಮ್ ಬೋಬ್ಡೆ ತಿಳಿಸಿದ್ದಾರೆ.
ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ವಕ್ತಾರ ತನ್ವೀರ್ ಮಾತಾನಾಡಿ, ಮೆಟ್ಟಿಲು ದುರಸ್ತಿಗೊಳಿಸಲು ಆದೇಶ ಬಂದರೆ ಶೀಘ್ರವೇ ಆ ಕೆಲಸ ಕೈಗೆತ್ತಿಕೊಳ್ಳಲಾಗುವುದು.
ಅಟಲ್ ಘಾಟ್ ಬಳಿ ನಿರ್ಮಾಣ ಕಾರ್ಯ ನಡೆಯುತ್ತಿದ್ದ ವೇಳೆ ಕೆಲ ಭಕ್ತರು ಆರತಿ ಮಾಡಲು ಸ್ಥಳ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಕುಳಿತುಕೊಂಡು ಪ್ರಾರ್ಥನೆ ಮಾಡಲು ಸ್ಥಳವಿಲ್ಲ ಎಂದು ಹೇಳಿದ್ದರು. ಅಟಲ್ ಘಾಟ್ ನಲ್ಲಿ ಈಗಾಗಲೇ ಮೆಟ್ಟಿಲುಗಳನ್ನು ನಿರ್ಮಿಸಲಾಗಿರುವುದರಿಂದ, ಘಾಟ್ ನ ಮೇಲ್ಭಾಗದಲ್ಲಿರುವ 30 ಚದರ ಅಡಿ ವಿಸ್ತೀರ್ಣ ಪ್ರದೇಶದಲ್ಲಿ ಪ್ರವಾಸಿಗರಿಗೆ ಕುಳಿತುಕೊಳ್ಳಲು ಉಪಯೋಗವಾಗುವಂತಹ ಸ್ಥಳಾವಕಾಶವನ್ನು ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.