ಕೇರಳ, ಡಿ 19 (Daijiworld News/PY) : ಒಂದು ತಿಂಗಳ ಹಿಂದೆ ವಯನಾಡಿನ ಸರ್ಕಾರಿ ಹೈಯರ್ ಸೆಕೆಂಡರಿಯ 5ನೇ ತರಗತಿಯ ವಿದ್ಯಾರ್ಥಿನಿಗೆ ಹಾವು ಕಡಿದು ಮೃತಪಟ್ಟಿದ್ದು ಇದಾದ ಬಳಿಕ ಇನ್ನೊಂದು ವಿದ್ಯಾರ್ಥಿಗೆ ಹಾವು ಕಡಿದು ಅಸ್ವಸ್ಥಗೊಂಡ ಘಟನೆ ಮಂಗಳವಾರ ನಡೆದಿದೆ.
ಹಾವು ಕಚ್ಚಿದ ವಿದ್ಯಾರ್ಥಿಯನ್ನು ಮೊಹಮ್ಮದ್ ರೆಹಾನ್ ಎಂದು ಗುರುತಿಸಲಾಗಿದ್ದು ಈತ ಸುಲ್ತಾನ್ ಬತ್ತೇರಿಯ ಬೀನಾಚಿಯಲ್ಲಿರುವ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 2 ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.
"ಈ ಹಿಂದೆ ನಡೆದ ಘಟನೆಯಲ್ಲಿ ವಿದ್ಯಾರ್ಥಿನಿಗೆ ಶಾಲಾ ಕೊಠಡಿಯೊಳಗೆ ಹಾವು ಕಚ್ಚಿದ್ದು ಈಗ ನಡೆದ ಘಟನೆಯಲ್ಲಿ ಶಾಲಾ ಆವರಣದಲ್ಲಿ ಹಾವು ಕಚ್ಚಿದೆ" ಎಂದು ಶಾಲಾಡಳಿತ ಮಂಡಳಿ ತಿಳಿಸಿದ್ದಾರೆ.
ಹಾವು ಕಡಿದು ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿಯನ್ನು ತಕ್ಷಣವೇ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದ್ದು ಆತ ಈಗ ಅಪಾಯದಿಂದ ಪಾರಾಗಿದ್ದಾನೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ಪರೀಕ್ಷೆ ಮುಗಿಸಿ ಮನೆಗೆ ತೆರಳಿದ ವಿದ್ಯಾರ್ಥಿಯು ಹಾವು ಕಚ್ಚಿದ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಾನೆ. ತಕ್ಷಣವೇ ಆತನನ್ನು ಪೋಷಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆಯ ಬಳಿ ಶಾಲಾಡಳಿತ ಮಂಡಳಿ ಶಾಲಾ ಆವರಣವನ್ನು ಪರೀಕ್ಷಿಸಿದಾಗ ಹಾವು ಎಲ್ಲಿಯೂ ಕಂಡುಬಂದಿಲ್ಲ. ಆ ಕೂಡಲೇ ಜಿಲ್ಲಾ ಶಿಕ್ಷಣಾಧಿಕಾರಿ ಶಾಲಾಡಳಿತ ಮಂಡಳಿಗೆ ಶಾಲಾ ಆವರಣವನ್ನು ಸ್ವಚ್ಛಗೊಳಿಸುವಂತೆ ಆದೇಶಿಸಿದ್ದಾರೆ.
ಕಳೆದ ತಿಂಗಳು ಖಾಸಗಿ ಶಾಲಾ ವಿದ್ಯಾರ್ಥಿನಿ ಹಾವು ಕಡಿದು ಮೃತ ಪಟ್ಟಿದ್ದು, ಆ ಕಾರಣಕ್ಕಾಗಿ ವಿದ್ಯಾರ್ಥಿಗಳು ಇಂತಹ ಘಟನೆಗಳ ಬಗ್ಗೆ ಗಮನ ಹರಿಸದ ಶಿಕ್ಷಕರ ಹಾಗೂ ವೈದ್ಯರ ವಿರುದ್ದ ಪ್ರತಿಭಟನೆಯನ್ನು ನಡೆಸಿದ್ದರು. ಈ ಹಿನ್ನಲೆಯಲ್ಲಿ ಶಿಕ್ಷಕರ ಹಾಗೂ ವೈದ್ಯರ ಮೇಲೆ ದೂರು ದಾಖಲಿಸಲಾಗಿತ್ತು.