ಬೆಂಗಳೂರು, ಡಿ 20 (Daijiworld News/PY) : ಪೌರತ್ವ ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟದ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಡಿಸಿಪಿ ರಾಷ್ಟ್ರಗೀತೆ ಹಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಗುರುವಾರ ಟೌನ್ ಹಾಲ್ನಲ್ಲಿ ನಡೆಯುತ್ತಿರುವ ಹೋರಾಟದ ಪ್ರತಿಭಟನಾಕಾರರನ್ನು ಸ್ಥಳದಿಂದ ಕಳುಹಿಸಲು ಬೆಂಗಳೂರು ಕೇಂದ್ರ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಅವರು ರಾಷ್ಟ್ರಗೀತೆ ಹಾಡಿದರು. ಡಿಸಿಪಿ ರಾಷ್ಟ್ರಗೀತೆ ಹಾಡುತ್ತಿದ್ದಂತೆ ಪ್ರತಿಭಟನಾಕಾರರು ತಮ್ಮ ಸ್ಥಳದಿಂದ ಎದ್ದು ನಿಂತು, ಪ್ರತಿಭಟನೆಯನ್ನು ಅಂತ್ಯಗೊಳಿಸಲು ಒಪ್ಪಿಕೊಂಡರು.
ಸದ್ಯ ಡಿಸಿಪಿ ರಾಷ್ಟ್ರಗೀತೆ ಹಾಡಿ ಪ್ರತಿಭಟನಾಕಾರರನ್ನು ಸಮಾಧಾನ ಮಾಡಿದ ವಿಡಿಯೋ ವೈರಲ್ ಆಗಿದ್ದು, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪೌರತ್ವ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಸಹ ಬೆಂಗಳೂರು ನಗರದಾದ್ಯಂತ ನಿಷೇಧಾಜ್ಞೆ ಮುಂದುವರಿಯಲಿದೆ.
ಗುರುವಾರ ನಡೆದ ಪ್ರತಿಭಟನೆಯಲ್ಲಿ ಪೊಲೀಸರು 244 ಜನರನ್ನು ವಶಕ್ಕೆ ತೆಗೆದುಕೊಂಡು 8 ಎಫ್ಐಆರ್ ಗಳನ್ನು ದಾಖಲಿಸಿದ್ದಾರೆ. ಇಂದು ಸಹ ಪ್ರತಿಭಟನೆ ನಡೆಯುವ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆ ಪೊಲೀಸರ ಭದ್ರತೆಯನ್ನು ಜಾಸ್ತಿ ಮಾಡಿದ್ದು, ಪ್ರತಿಭಟನೆ ನಡೆಸದಂತೆ ತಿಳಿಸಿದ್ದಾರೆ.