ಬೆಂಗಳೂರು, ಡಿ 20 (Daijiworld News/PY) : ಕನ್ನಡದ ಪ್ರಸಿದ್ಧ ವಿದ್ವಾಂಸ, ವಿಮರ್ಶಕ, ಹೋರಾಟಗಾರ, ಪ್ರಾಧ್ಯಾಪಕ ಹಾಗೂ ಹಿರಿಯ ಬರಹಗಾರರಾದ ಪ್ರೊ.ಎಲ್.ಎಸ್.ಶೇಷಗಿರಿ ರಾವ್ ಇಂದು ನಿಧನರಾಗಿದ್ದಾರೆ.
ಇವರಿಗೆ 94 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ವರ್ಷಗಳಿಂದ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದ ಇವರು ಶುಕ್ರವಾರ ಬೆಳಗ್ಗೆ ಜೆಪಿ ನಗರದ ಮಾರೇನಹಳ್ಳಿಯಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಪ್ರೊ.ಎಲ್.ಎಸ್.ಶೇಷಗಿರಿ ರಾವ್ ಅವರು ಉಡುಪಿಯಲ್ಲಿ ನಡೆದ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ನ್ಯಾಷನಲ್ ಬುಕ್ ಟ್ರಸ್ಟ್, ಕೇಂದ್ರ ಸಾಹಿತ್ಯ ಅಕಾಡೆಮಿಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಷ್ಟ್ರೋತ್ಥಾನ ಬಳಗದ ಕಿರು ಹೊತ್ತಿಗೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ, ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲ ಅಧ್ಯಕ್ಷರು ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದು, ಇಂಗ್ಲಿಷ್ ಪ್ರಾಧ್ಯಾಪಕರಾಗಿಯೂ ಕನ್ನಡದ ಸೇವೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಇವರು ಫ್ರಾನ್ಸ್ ಕಾವ್ಯ, ವಿಲಿಯಮ್ ಶೇಕ್ಸ್ಪಿಯರ್, ಸಾಹಿತ್ಯ ಬದುಕು, ಸಾಹಿತ್ಯ ವಿಶ್ಲೇಷಣೆ, ಟಿ.ಪಿ.ಕೈಲಾಸಂ, ಕನ್ನಡ ಕೃತಿಗಳು, ಎ ಹಿಸ್ಟರಿ ಆಫ್ ಕನ್ನಡ ಲಿಟರೇಚರ್, ಇಂಟ್ರಡಕ್ಶನ್ ಟು ಮಾಡರ್ನ್ ಕನ್ನಡ ಲಿಟರೇಚರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹಲವಾರು ಕೃತಿಗಳನ್ನು ಆಂಗ್ಲ ಭಾಷೆಯಲ್ಲಿ ಬರೆದಿದ್ದಾರೆ.
ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಅನಕೃ ಪುರಸ್ಕಾರ, ಬಿ.ಎಂ ಶ್ರೀ ಪುರಸ್ಕಾರಗಳು ಸಂದಿವೆ.