ಮೈಸೂರು, ಡಿ 20 (Daijiworld News/MSP): ಮುಗ್ದ ಮುಸ್ಲಿಂ ಯುವಕರನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಪ್ರಚೋದಿಸಿ, ಅವರೊಳಗೆ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇತಿಹಾಸದಲ್ಲಿ ಮಾಡಿರುವ ದ್ರೋಹ ಮುಚ್ಚಿಡಲು ಕಾಂಗ್ರೆಸ್ ಅಮಾಯಕ ಮುಸ್ಲಿಂರಿಗೆ ಪ್ರಚೋದಿಸಿ ಭಯ ಹುಟ್ಟುಸುವ ಕುಮ್ಮಕ್ಕಿನ ಕೆಲಸ ನಡೆಸುತ್ತಿದೆ. ಕೇಂದ್ರ ಸರ್ಕಾರ ಪಾಕ್, ಅಪ್ಘಾನ್, ಬಾಂಗ್ಲಾದೇಶದಲ್ಲಿ ತುಳಿತಕ್ಕೊಳಗಾಗಿ ನಿರಾಶ್ರಿತರಾಗಿರುವ ಅಲ್ಪ ಸಂಖ್ಯಾತರಿಗೆ ನಮ್ಮ ಭಾರತದ ನಾಗರಿಕತ್ವ ನೀಡುವ ಸಲುವಾಗಿ ಸಿಎಎ ಜಾರಿಗೆ ತಂದಿರುವುದು. ಅದು ಬಿಟ್ಟು ಇಲ್ಲಿನ ಮುಸ್ಲಿಂ ಬಂಧುಗಳನ್ನು ನೀವು ಭಾರತೀಯರೇ ಹೌದೋ ಅಲ್ಲವೋ ಎಂದು ಸಾಬೀತು ಪಡಿಸಲು ಅಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಚಿತಾವಣೆಯಿಂದ ಮಂಗಳೂರಿನಲ್ಲಿ ಇಬ್ಬರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಮುಸ್ಲಿಂ ಭಾಂದವರೇ ಅರ್ಥಮಾಡಿಕೊಳ್ಳಿ, ನಿಮ್ಮನ್ನು ಯಾರೂ ದೇಶದಿಂದ ಹೊರ ಹಾಕುತ್ತಿಲ್ಲ. ಶಾಸಕ ಯು.ಟಿ.ಖಾದರ್ ಪೌರತ್ವ ಕಾಯ್ದೆ ಜಾರಿಯಾದರೆ ರಾಜ್ಯಾದ್ಯಂತ ಬೆಂಕಿ ಹೊತ್ತಿ ಉರಿಯತ್ತದೆ ಎಂದು ತಿಳಿಸಿದ್ದರು. ಖಾದರ್ ಕೊಟ್ಟಿರುವ ಚಿತಾವಣೆಯಿಂದಲೇ ಇಬ್ಬರು ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.