ನವದೆಹಲಿ,ಡಿ 21 (Daijiworld News/MSP): ದೇಶದ ಆರ್ಥಿಕ ವ್ಯವಸ್ಥೆ ಕುಸಿಯುತ್ತಿದೆ ಎಂಬ ವದಂತಿಗಳ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಇದೇ ವಿಚಾರವಾಗಿ ಮಾತನಾಡಿದ್ದು, " ದೇಶದಲ್ಲಿ ಕುಂಠಿತ ಹಾದಿಯಲ್ಲಿ ಸಾಗುತ್ತಿದ್ದರೂ, ಮುಂದೆ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಪುಟಿದೇಳುವ ಸಾಮರ್ಥ್ಯವನ್ನು ಭಾರತದ ಆರ್ಥಿಕತೆ ಹೊಂದಿದೆ" ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಶುಕ್ರವಾರ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ ಸಮಾರಂಭದಲ್ಲಿ ಮಾತನಾಡಿದ ಮೋದಿ " ದೇಶದ ಆರ್ಥಿಕತೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ನಮ್ಮ ದೇಶದ ಸಧ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಈಗ ಕೇಳಿಬರುತ್ತಿರುವ ಟೀಕೆ-ಟಿಪ್ಪಣಿಗಳಿಗೆ ಸವಾಲು ಹಾಕಲು ಇಚ್ಚಿಸುವುದಿಲ್ಲ. ಆದರೆ ಇಂತಹ ಚರ್ಚೆಗಳ ಕೊನೆಯೂ ಸಕಾರಾತ್ಮಕವಾಗಿರಲಿ ಎನ್ನುವುದು ನನ್ನ ಆಶಯವಾಗಿದೆ ಎಂದಿದ್ದಾರೆ.
ಕುಂಠಿತ ಆರ್ಥಿಕತೆಯಿಂದ ಗರಿಷ್ಠ ವೃದ್ಧಿ ಆರ್ಥಿಕತೆಯ ದಾರಿಗೆ ಮರಳಲಿದೆ. ಜಿಡಿಪಿ ದರ ಏರಿಕೆ ದಾಖಲಿಸಲು ಕಾರ್ಪೋರೇಟ್ಗಳು ಬಂಡವಾಳ ಹೂಡಿಕೆ ಹೆಚ್ಚಿಸುವ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬೇಕು. ಈ ಹಿಂದೆ ಯುಪಿಎ ಸರ್ಕಾರದ ಆಡಳಿತದ ಅವಧಿಯಲ್ಲೂ ಅರ್ಥಿಕತೆ ತೀವ್ರ ಕುಸಿತ ಕಂಡಿತ್ತು. ಮಾತ್ರವಲ್ಲದೇ ಈ ಹಿಂದೆ ಹಲವಾರು ಬಾರಿ ಏರಿಳಿತಗಳು ನಡೆದಿವೆ. ಇಂತಹ ಸಂದರ್ಭಗಳಿಂದ ಹೊರ ಬಂದು ಪುಟಿದೇಳುವ ಸಾಮರ್ಥ್ಯ ದೇಶಕ್ಕಿದೆ ಎಂದು ಆರ್ಥಿಕತೆಯು ಚೇತರಿಕೆ ಹಾದಿಯಲ್ಲಿ ಮರಳಿದೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.