ಬೆಂಗಳೂರು, ಡಿ 21 (Daijiworld News/PY) : ಪೌರತ್ವ ಕಾಯ್ದೆಯ ವಿರುದ್ದ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಮಂಗಳೂರಿಗೆ ಆಗಮಿಸಲಿದ್ದ ಸಿದ್ದರಾಮಯ್ಯ ಅವರನ್ನು ಮಂಗಳೂರಿಗೆ ಹೋಗದಂತೆ ಪೊಲೀಸ್ ಕಮಿಷನರ್ ನೋಟಿಸ್ ನೀಡಿದ್ದರ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ನೋಟೀಸ್ ನೀಡಿದ್ದರ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಗಳೂರಿಗೆ ತಲುಪುವ ವೇಳೆ ಏರ್ ಪೋರ್ಟಿನಲ್ಲಿ ನಮ್ಮ ವಿಮಾನಕ್ಕೆ ಇಳಿಯಲು ಅನುಮತಿ ಕೊಡಬಾರದೆಂದು ಏರ್ ಪೋರ್ಟಿಗೆ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ಅಲ್ಲಿ ಲ್ಯಾಂಡ್ ಆಗಲು ನಮಗೆ ಅನುಮತಿ ಕೊಡಲಿಲ್ಲ. ಹಿಂಸಾಚಾರದ ವೇಳೆ ಪೊಲೀಸರ ಗೋಲಿಬಾರ್ ಗೆ ಇಬ್ಬರು ಬಲಿಯಾಗಿದ್ದ ಕಾರಣ ನಾನು ಅವರ ಮನೆಗೆ ಸಾಂತ್ವಾನ ನೀಡಲು ಹಾಗೂ ಘಟನೆಯ ಹಿನ್ನೆಲೆ ತಿಳಿಯಲು ಹೋಗುತ್ತಿದ್ದೆ. ಯಾವುದೇ ಕಾರಣಕ್ಕೂ ಶಾಂತಿ ಕದಡಲು ಹೋಗಿಲ್ಲ ಎಂದು ಹೇಳಿದ್ದಾರೆ.
ಪ್ರತಿಭಟನೆಯ ವೇಳೆ ಇಬ್ಬರನ್ನು ಉದ್ದೇಶಪೂರ್ವಕವಾಗಿಯೇ ಕೊಂದಿದ್ದಾರೆ, ಇದಕ್ಕೆಲ್ಲಾ ಸರ್ಕಾರವೇ ಬೆಂಬಲ ನೀಡಿದೆ, ಅವರು ಯಾರೂ ಕೂಡ ಹಿಂಸಾಚಾರದಲ್ಲಿ ತೊಡಗಿದವರೇ ಅಲ್ಲ. ಇದ್ಲಲದೇ ಸೆಕ್ಷನ್ 144 ಜಾರಿಯಲ್ಲಿದ್ದ ಕಾರಣ ಪ್ರತಿಭಟನೆ ಮಾಡಬಾರದು ಎಂದು ಯಾವುದೇ ನ್ಯಾಯಾಲಯದಲ್ಲಿ ಹೇಳಿಲ್ಲ ಎಂದು ಹೇಳಿದರು.
ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗೋಲಿಬಾರ್ ನಡೆಸುವ ಅವಶ್ಯಕತೆ ಇರಲಿಲ್ಲ, ಪ್ರತಿಭಟನೆ ನಡೆಸುತ್ತಿದ್ದವರನ್ನು ಅರೆಸ್ಟ್ ಮಾಡಬಹುದಿತ್ತು. ಇದೀಗ ಪೊಲೀಸರು ಮಾಡಿದ ತಪ್ಪುಗಳನ್ನು ಮುಚ್ಚಿಹಾಕುವ ಸಲುವಾಗಿ ನಾನು ಮಂಗಳೂರಿಗೆ ಹೋಗುವುದನ್ನು ತಡೆದಿದ್ದಾರೆ. ಆದರೆ ನನ್ನನ್ನು ತಡೆದು ಮುಖ್ಯಮಂತ್ರಿಗೆ ತೆರಳಲು ಅವಕಾಶ ನೀಡಿದ್ದಾರೆ ಎಂದು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.