ಹೈದರಾಬಾದ್, ಡಿ 21 (Daijiworld News/PY) : ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆಗೆ ಸಂಬಂಧಪಟ್ಟ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್ ಕೌಂಟರ್ ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹಗಳ ಮರು ಮರಣೋತ್ತರ ಪರೀಕ್ಷೆ ನಡೆಸುವಂತೆ ತೆಲಂಗಾಣ ಹೈಕೋರ್ಟ್ ಆದೇಶಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಪೊಲೀಸರು ಎನ್ ಕೌಂಟರ್ ಮಾಡಿದ್ದು, ಆರೋಪಿಗಳ ಮೃತದೇಹವನ್ನು ಮರು ಮರಣೋತ್ತರ ಪರೀಕ್ಷೆ ನಡೆಸಲು ನವದೆಹಲಿಯ ಏಮ್ಸ್ ಆಸ್ಪತ್ರೆಯ ಫೊರೆನ್ಸಿಕ್ ತಜ್ಞ ವೈದ್ಯರ ತಂಡದಿಂದ ನೆರವೇರಿಸುವಂತೆ ತೆಲಂಗಾಣ ಹೈಕೋರ್ಟ್ ಶನಿವಾರ ಆದೇಶ ನೀಡಿದೆ.
ಮೃತರಾದ ಆರೋಪಿಗಳ ಮೃತದೇಹಗಳ ಮರು ಮರಣೋತ್ತರ ಪರೀಕ್ಷೆಯನ್ನು 48 ಗಂಟೆಗಳ ಒಳಗಾಗಿ, ಅಂದರೆ, ಡಿ.23ರ ಸೋಮವಾರ ಸಾಯಂಕಾಲ 5 ಗಂಟೆಯೊಳಗಾಗಿ ಮಾಡುವಂತೆ ತೆಲಂಗಾಣ ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.
ಘಟನೆಯ ತನಿಖೆ, ಆರೋಪಿಗಳನ್ನು ಎನ್ ಕೌಂಟರ್ ಮಾಡುವ ಸಂದರ್ಭದಲ್ಲಿ ಬಳಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಹಾಗೂ ಪರಿಶೀಲಿಸುವುದಕ್ಕಾಗಿ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ರಾಜ್ಯ ಸರ್ಕಾರವು ಈ ಹಿಂದೆ ರಚಿಸಿದ ಎಸ್ಐಟಿಗೆ ನ್ಯಾಯಾಲಯ ನಿರ್ದೇಶನ ಹೇಳಿದ್ದು, ಕೇಸ್ ಡೈರಿ, ಲಾಗ್ಬುಕ್ಗಳು, ಪ್ರಕರಣದಲ್ಲಿ ನೋಂದಾಯಿಸಲಾದ ಎಫ್ಐಆರ್ ಇತ್ಯಾದಿಗಳನ್ನು ಸಂಗ್ರಹಿಸಲು ಎಸ್ಐಟಿಗೆ ನಿರ್ದೇಶನ ನೀಡಿದೆ. ಸಂಗ್ರಹಿಸಿದ ಎಲ್ಲ ಸಾಕ್ಷ್ಯಗಳನ್ನು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ರಚಿಸಿರುವ ಮೂರು ಸದಸ್ಯರ ವಿಚಾರಣಾ ಆಯೋಗದ ಮುಂದೆ ಇಡಬೇಕು ಎಂದು ಆದೇಶಿಸಿದೆ.