ಬೆಂಗಳೂರು, ಡಿ 21 (DaijiworldNews/SM): ರಾಜ್ಯದಲ್ಲಿ ಇತ್ತೀಚಿಗೆ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಆಯ್ಕೆಯಾಗಿ ಬಂದವರು ಡಿಸೆಂಬರ್ ೨೨ರಂದು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಮಾಣ ವಚನ ಬೋಧಿಸಲಿದ್ದಾರೆ.
ವಿಧಾನಸೌಧದ ಬಾಂಕ್ವೇಟ್ ಹಾಲ್ ನಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಡಿಸೆಂಬರ್ 5ರಂದು 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. ಕೇವಲ 2 ಸ್ಥಾನಗಳನ್ನು ಮಾತ್ರವೇ ಕಾಂಗ್ರೆಸ್ ಗೆದ್ದುಕೊಂಡಿದ್ದರೆ, ಬಿಜೆಪಿ 12 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. ಉಳಿದಂತೆ 1 ಸ್ಥಾನ ಪಕ್ಷೇತರ ಅಭ್ಯರ್ಥಿ ಪಾಲಾಗಿತ್ತು.
ಕೆ.ಆರ್.ಪುರ ಕ್ಷೇತ್ರದ ಭೈರತಿ ಬಸವರಾಜ, ಹೊಸಕೋಟೆಯ ಶರತ್ ಬಚ್ಚೇಗೌಡ, ಯಶವಂತಪುರದ ಎಸ್.ಟಿ.ಸೋಮಶೇಖರ್, ಶಿವಾಜಿನಗರದ ರಿಝ್ವನ್ ಅರ್ಶದ್, ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್, ಹುಣಸೂರ ಕ್ಷೇತ್ರದ ಎಚ್.ಪಿ.ಮಂಜುನಾಥ್, ಕೆ.ಆರ್.ಪೇಟೆ ಕ್ಷೇತ್ರದ ಕೆ.ಸಿ.ನಾರಾಯಣಗೌಡ, ಹಿರೇಕೆರೂರು ಕ್ಷೇತ್ರದ ಬಿ.ಸಿ.ಪಾಟೀಲ್, ಗೋಕಾಕ್ ಕ್ಷೇತ್ರದ ರಮೇಶ್ ಜಾರಕಿಹೊಳಿ, ಅಥಣಿಯ ಮಹೇಶ್ ಕಮಟಳ್ಳಿ, ರಾಣೆಬೆನ್ನೂರಿನ ಅರುಣ್ಕುಮಾರ್, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಕೆ.ಗೋಪಾಲಯ್ಯ, ವಿಜಯನಗರದ ಆನಂದ್ಸಿಂಗ್, ಕಾಗವಾಡದ ಶ್ರೀಮಂತಪಾಟೀಲ್, ಯಲ್ಲಾಪುರದ ಶಿವರಾಮ್ ಹೆಬ್ಬಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.