ನವದೆಹಲಿ, ಡಿ 22 (Daijiworld News/MB) : ಉತ್ತರ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಸಾವನ್ನಪ್ಪಿದವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಈಗ ೧೬ ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಉತ್ತರ ಪ್ರದೇಶದಲ್ಲಿ ನೇಮಿಸಲಾಗಿದ್ದ ಭದ್ರತಾ ಸಿಬ್ಬಂದಿಗಳಲ್ಲಿ 260 ಜನರಿಗೆ ಗಾಯವಾಗಿದ್ದು, ಈ ಪೈಕಿ 57 ಜನರಿಗೆ ಗುಂಡೇಟಿನಿಂದ ಗಾಯವಾಗಿದೆ ಎಂದು ರಾಜ್ಯ ಪೊಲೀಸರುಮಾಹಿತಿ ನೀಡಿದ್ದಾರೆ.
ರಾಮ್ ಪುರದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರು ನಡುವೆ ನಡೆದ ಘರ್ಷಣೆ ವೇಳೆಯಲ್ಲಿ ಒಬ್ಬರು ಮೃತಪಟ್ಟಿದ್ದು ಹಲವರಿಗೆ ಗಾಯವಾಗಿದೆ.
ಇನ್ನೂ ಕಾನ್ಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಪೊಲೀಸ್ ಠಾಣೆಗೆ ಇಟ್ಟಿಗೆ ತೂರಾಟ ಮಾಡಿ ಠಾಣೆಗೆ ಬೆಂಕಿ ಹಚ್ಚಿದ್ದು ಪೊಲೀಸರು ಸೇರಿದಂತೆ ಅನೇಕ ಜನರಿಗೆ ಗಾಯಗಳಾಗಿವೆ. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಆಶ್ರುವಾಯು ಸಿಡಿಸಿದ್ದಾರೆ.
ಹಳೆ ದೆಹಲಿಯ ದರಿಯಾಗಂಜ್ ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸೇರಿದಂತೆ 15 ಮಂದಿಯನ್ನು ಬಂಧಿಸಲಾಗಿದ್ದು ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ.
ಅಸ್ಸಾಂನಲ್ಲಿ ಪ್ರತಿಭಟನೆ ನಡೆಸಲಾಗಿದೆ. ಹಾಗೆಯೇ ಬಿಹಾರದಲ್ಲಿ ತೀವ್ರವಾದ ಪ್ರತಿಭಟನೆ ನಡೆಸಲಾಗಿದ್ದು ಬಂದ್ನಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಕೇರಳದಲ್ಲಿ ಕಮ್ಯೂನಿಸ್ಟ್ ಹಾಗೂ ಕಾಂಗ್ರೆಸ್ ನೇತೃತ್ವದಲ್ಲಿ ಹಲವು ಕಡೆಗಳಲ್ಲಿ ಪ್ರಿಭಟನೆ ನಡೆಸಲಾಗಿದೆ.