ದೆಹಲಿ, ಡಿ 22 (Daijiworld News/PY) : ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ ಭಾರತೀಯ ಜನತಾ ಪಾರ್ಟಿಯು ಬೃಹತ್ ರ್ಯಾಲಿಯನ್ನು ಹಮ್ಮಿಕೊಂಡಿದೆ.
ದೆಹಲಿಯ ಅಕ್ರಮ ಕಾಲೋನಿಗಳನ್ನು ಸಕ್ರಮಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರದ ಸಂಬಂಧ ಈ ರ್ಯಾಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಈ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.
ರ್ಯಾಲಿಯಲ್ಲಿ ಮೋದಿಯವರು ಭಾಗವಹಿಸುತ್ತಿದ್ದು, ಈ ವೇಳೆ ಮೋದಿ ಹತ್ಯೆಗೆ ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮದ್ ಉಗ್ರ ಸಂಘಟನೆಯ ಭಯೋತ್ಪಾದಕರು ಸಂಚು ರೂಪಿಸಿದ್ದಾರೆಂದು ಗುಪ್ತಚರ ದಳವು ದೆಹಲಿ ಪೊಲೀಸರಿಗೆ ಹಾಗೂ ಪ್ರಧಾನಮಂತ್ರಿಯ ಭದ್ರತೆಯನ್ನು ನೋಡಿಕೊಳ್ಳುವ ಎಸ್'ಜಿಪಿ ಪಡೆಗೆ ಸಂದೇಶ ರವಾನಿಸಿದ್ದು, ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ.
ಇಂದು ನಡೆಯಲಿರುವ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿರುವ ನರೇಂದ್ರ ಮೋದಿ, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾತನಾಡುವ ನಿರೀಕ್ಷೆಯಿದೆ.
ರ್ಯಾಲಿಯ ವೇಳೆ ಹೆಚ್ಚಿನ ಭದ್ರಾತಾ ವ್ಯವಸ್ಥೆಯನ್ನು ಮಾಡಲಾಗಿದ್ದು, ರ್ಯಾಲಿಯಲ್ಲಿ ವಿವಿಧ ರಾಜ್ಯಗಳ ಎನ್'ಡಿಎ ಮುಖ್ಯಮಂತ್ರಿಗಳು, ಕೇಂದ್ರ ಸಚಿವರುಗಳು, ಬಿಜೆಪಿ ನಾಯಕರು, ದೊಡ್ಡ ಪ್ರಮಾಣದಲ್ಲಿ ಜನರು ಹಾಗೂ ಪತ್ರಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.