ಬೆಂಗಳೂರು, ಡಿ 22 (Daijiworld News/PY) : ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ದ ನಡೆದ ಹಿಂಸಾಚಾರ ಹಾಗೂ ಪೊಲೀಸರು ನಡೆಸಿದ ಗೋಲಿಬಾರ್ ವೇಳೆ ಮೃತಪಟ್ಟ ಕುದ್ರೋಳಿ ನಿವಾಸಿ ಅಬ್ದುಲ್ ಜಲೀಲ್ ಹಾಗೂ ಕಂದಕ್ ನಿವಾಸಿ ನೌಶೀನ್ ಅವರ ಕುಟುಂಬಗಳಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಲಾ 10 ಲಕ್ಷ ರೂಪಾಯಿ ಪರಿಹಾರ ಕೊಡುವುದಾಗಿ ಘೋಷಿಸಿದ್ದಾರೆ.
ಹಿಂಸಾಚಾರದಲ್ಲಿ ಮೃತಪಟ್ಟವರ ಎರಡೂ ಕುಟುಂಬಗಳಿಗೆ ಶೀಘ್ರವೇ ಪರಿಹಾರದ ಹಣ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರಿಗೆ ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ.
ಪೌರತ್ವ ಮಸೂದೆಯ ವಿರುದ್ದ ಗಲಭೆಯು ತೀವ್ರವಾದ ಕಾರಣ ಗಲಭೆಯ ನಿಯಂತ್ರಣಕ್ಕೆ ಗೋಲಿಬಾರ್ ಅನಿವಾರ್ಯವಾಗಿತ್ತು ಎಂದು ಮುಖ್ಯಮಂತ್ರಿಗಳು ಶನಿವಾರ ಮಂಗಳೂರಿನಲ್ಲಿ ಸ್ಪಷ್ಟನೆ ನೀಡಿದ್ದರು.