ಶಿವಮೊಗ್ಗ, ಡಿ 22 (Daijiworld News/MB) : ತಮ್ಮ ಮಕ್ಕಳು ಮೊಮ್ಮಕಳಿಗೆ ಮನೆ ಚಿನ್ನ ಮುಂತಾದನ್ನು ಹಿರಿಯರು ನೀಡುವುದು ಸಾಮಾನ್ಯವಾದುದ್ದು. ಆದರೆ ಇಲ್ಲಿನ ದಂಪತಿಗಳು ಕಾಡನ್ನೇ ಮೊಮ್ಮಗಳಿಗೆ ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ.
ಶಿವಮೊಗ್ಗದ ಈ ದಂಪತಿಗಳು ಮುಂದಿನ ಪೀಳಿಗೆಗೆ ಮರಗಳನ್ನು ಉಳಿಸುವ ಉದ್ದೇಶದಿಂದ ಒಂದು ಎಕರೆ ಭೂಮಿಯನ್ನು ಖರೀದಿ ಮಾಡಿ ಅದರಲ್ಲಿ ಅಪರೂಪದ ಗಿಡಗಳನ್ನು ನೆಟ್ಟು ಅದಕ್ಕೆ "ಆರ್ವಿ" ವನ ಎಂದು ಹೆಸರಿಟ್ಟಿದ್ದಾರೆ.
ದಶಕಗಳಿಂದ ಪರಿಸರ ಸಂರಕ್ಷಣೆಗಾಗಿ ದುಡಿಯುತ್ತಿರುವ ಎಂಪಿಎಂ ಕಾರ್ಖಾನೆ ನಿವೃತ್ತ ಅಧಿಕಾರಿ, ಶಿವಮೊಗ್ಗ ನಿವಾಸಿ ಮಹಾದೇವಸ್ವಾಮಿ ಪೈಪ್ ಕಾಂಪೋಸ್ಟ್ ಗೊಬ್ಬರ ತಯಾರಿಕೆಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದ್ದಾರೆ. ಹಾಗೆಯೇ ಪತ್ನಿ ಮಂಜುಳಾದೇವಿಯೂ ಇವರ ಪರಿಸರ ಸಂರಕ್ಷಣಾ ಕಾರ್ಯದಲ್ಲಿ ಕೈಜೋಡಿಸುತ್ತಿದ್ದಾರೆ. ಈ ದಂಪತಿಗಳ ವಿವಾಹಿತ ಪುತ್ರಿ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ತಮ್ಮ ಮೊಮ್ಮಗಳಿಗೆ ಪ್ರಾಣಿ ಪಕ್ಷಿಗಳ ಮೇಲೆ ವಿಶೇಷ ಕಾಳಜಿ ಹಾಗೂ ಪರಿಸರ ಪ್ರೇಮ ಇರುವುದನ್ನು ಗಮನಿಸಿದ ಅಜ್ಜಿ ಅಜ್ಜ ಮೊಮ್ಮಗಳಾದ ಆರ್ವಿಗೆ ಉಡುಗೊರೆ ನೀಡುವ ಉದ್ದೇಶದಿಂದ ಶಿವಮೊಗ್ಗ ತಾಲೂಕಿನ ಗೆಜ್ಜೇನಹಳ್ಳಿ ಬಳಿ 1.28 ಎಕರೆ ಜಮೀನನ್ನು ಖರೀದಿ ಮಾಡಿ ಆರು ತಿಂಗಳಿನಿಂದ ಗಿಡ ಬೆಳೆಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಮೊಮ್ಮಗಳ ಬರ್ತ್ಡೇ ದಿನದಂದು ಸುಮಾರು 400 ಗಿಡಗಳನ್ನು ಈ ನೆಟ್ಟಿದ್ದು ಈಗಾಗಲೇ ಆ ಗಿಡಗಳು ನಾಲ್ಕೈದು ಅಡಿ ಎತ್ತರಕ್ಕೆ ಬೆಳೆದಿವೆ.