ನವದೆಹಲಿ, ಡಿ 22 (Daijiworld News/MB) : ದೇಶದ ಜನರ ಉಜ್ವಲ ಭವಿಷ್ಯಕ್ಕಾಗಿ ಈ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡಲಾಗಿದ್ದು ಸಮಾಜದಲ್ಲಿರುವ ದೀನದಲಿತರು, ಬಡ ಜನರು ಹಾಗೂ ದಬ್ಬಾಳಿಕೆಗೆ ಒಳಗಾದವರ ಉದ್ಧಾರವಾಗಲಿದೆ. ಈ ಕಾಯ್ದೆಯ ಬಗ್ಗೆ ಕೆಲವು ರಾಜಕೀಯ ಪಕ್ಷ ಸುಳ್ಳನ್ನು ಹರಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರೋಪ ಮಾಡಿದ್ದಾರೆ.
ಇಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾರತೀಯ ಜನತಾ ಪಕ್ಷ ಏರ್ಪಡಿಸಿರುವ ಬೃಹತ್ ವಿಶಾಲ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, " ಈ ಕಾಯ್ದೆಯು ಎರಡೂ ಸದನಗಳಲ್ಲಿ ಅನುಮೋದನೆಯಾಗಿ ಜಾರಿಗೆ ಬಂದಿದ್ದು ಜನರ ತೀರ್ಪು ಹಾಗೂ ಸಂಸತ್ತನ್ನು ಎಲ್ಲರೂ ಗೌರವಿಸಬೇಕು.ಕೆಲವು ರಾಜಕೀಯ ಪಕ್ಷಗಳು ಈ ಕಾಯ್ದೆಯ ಬಗ್ಗೆ ವದಂತಿಯನ್ನು ಹಬ್ಬುತ್ತಿದೆ. ಜನರು ತಪ್ಪು ದಾರಿಗೆ ಹೋಗುವಂತೆ ಪ್ರಚೋಧನೆ ಮಾಡುತ್ತಿದೆ. ದೆಹಲಿಯಲ್ಲಿ ಅನಧಿಕೃತ ಕಾಲೊನಿಗಳನ್ನು ಅಧಿಕೃತಗೊಳಿಸುವ ಸಂದರ್ಭದಲ್ಲಿ ನಾವು ಅವರಲ್ಲಿ ಜಾತಿ, ಧರ್ಮ ಕೇಳಿದ್ದೇವೆಯೇ, ಅವರು ಯಾವ ಪಕ್ಷವನ್ನು ಬೆಂಬಲಿಸುತ್ತಾರೆ ಎಂಬುದನ್ನು ಕೇಳಿದ್ದೇವೆಯೇ, 1970, 1980ರ ಅವರ ದಾಖಲೆಗಳನ್ನು ಕೇಳಿದ್ದೇವೆಯೇ" ಎಂದು ಹೇಳಿದರು.
ಯಾವುದೇ ಯೋಜನೆಗಳನ್ನು ಹಾಗೂ ಸೌಲಭ್ಯವನ್ನು ಹಂಚುವಾಗ ಕೇಂದ್ರ ಸರ್ಕಾರ ಜನತೆಯಲ್ಲಿ ಜಾತಿ, ಧರ್ಮ ಕೇಳಿದ್ದೇಯೇ? ನಾವು ನಂಬಿಕೆ ಇಟ್ಟಿರುವುದು ಎಲ್ಲರನ್ನೊಳಗೊಂಡ ಎಲ್ಲರ ವಿಕಾಸದಲ್ಲಿ ಎಂದು ತಿಳಿಸಿದ್ದಾರೆ. ಹಾಗೆಯೇ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಅವರು,"ಪ್ರತಿಪಕ್ಷಗಳು ಜನರನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತಿದೆ. ನಾನು ಪ್ರಧಾನಿಯಾದ ನಂತರ ಮಾಡಿರುವ ಕಾರ್ಯಗಳನ್ನು ಪರೀಕ್ಷಿಸಲು ಪ್ರತಿಪಕ್ಷದವರಿಗೆ ಸವಾಲು ಹಾಕುತ್ತೇನೆ. ನಾಣು ಮಾಡಿದ ಯೋಜನೆಗಳಿಂದ ಜನರಿಗೆ ಸಹಾಯವಾಗಿದೆ. ಆ ಯೋಜನೆಯ ಸಂದರ್ಭದಲ್ಲಿ ನಾನು ಜನರಲ್ಲಿ ಅವರ ಜಾತಿ ಧರ್ಮಗಳನ್ನು ಕೇಳಿಲ್ಲ. ಹಾಗಿದ್ದರೂ ನೀವು ನಮ್ಮನ್ನು ಯಾಕೆ ಇಷ್ಟೂ ದ್ವೇಷ ಮಾಡುತ್ತೀರಿ? ಜನರನ್ನು ಹಾದಿ ತಪ್ಪಿಸಿ ನಿಮಗೆ ದೊರಕುವ ಲಾಭವಾದರೂ ಏನು? ಎಂದು ಪ್ರತಿಪಕ್ಷಗಳ ಮೇಲೆ ಹರಿಹಾಯ್ದಿದ್ದಾರೆ.
ದೆಹಲಿಯಲ್ಲಿ ಇಷ್ಟೊಂದು ಹಿಂಸಾಚಾರಗಳು ನಡೆದರೂ ಆಡಳಿತ ಪಕ್ಷ ರಾಜ್ಯದಲ್ಲಿ ಶಾಂತಿ ಕಾಪಾಡಲು ಯಾವುದೇ ಕರೆ ನೀಡಿಲ್ಲ. ಇದರ ಅರ್ಥ ಆಡಳಿತ ಪಕ್ಷ ಹಿಂಸೆಯನ್ನು ಒಪ್ಪಿದೆ ಎಂದು ಅಲ್ಲವೇ? ದೇಶದಲ್ಲಿ ಸ್ವಾತಂತ್ರ್ಯ ದೊರೆತ ಬಳಿಕ 33 ಸಾವಿರ ಪೊಲೀಸರು ಬಲಿದಾನ ಮಾಡಿದ್ದಾರೆ. ಆದರೆ ಇಂದು ಅವರ ಮೇಲೆಯೇ ದಾಳಿ ಮಾಡಲಾಗುತ್ತಿದೆ. ನನ್ನ ಮೇಲೆ ವಿರೋಧ ಪಕ್ಷದವರಿಗೆ ದ್ವೇಷವಿದ್ದಲ್ಲಿ, ನನ್ನ ಪ್ರತಿಕೃತಿ ದಹಿಸಲಿ. ಅದನ್ನು ಬಿಟ್ಟು ಬಡವರ ಮೇಲೆ ದಾಳಿ ಮಾಡಿ ಅವರಿಗೆ ತೊಂದರೆ ನೀಡಬೇಡಿ ಎಂದು ಹೇಳಿದ್ದಾರೆ.
ಈ ಕಾಯ್ದೆಯಿಂದಾಗಿ ಮುಸಲ್ಮಾನರಿಗೆ ಯಾವುದೇ ತೊಂದರೆ ಇಲ್ಲ. ಆದರೆ ವಿರೋಧ ಪಕ್ಷಗಳು ಸುಳ್ಳು ಹೇಳಿ ಅವರ ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು.