ಬೆಂಗಳೂರು, ಡಿ 22 (Daijiworld News/MB) : "ಜನರು ಮೋದಿಗೆ ಜೈ ಎಂದು ಹೇಳುವ ಬದಲಿಗೆ ಭಾರತ ಎಂದು ಕೂಗಬೇಕೆಂದು" ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಭಾನುವಾರ ಇಲ್ಲಿನ ಪುರಭವನದ ಮುಂಭಾಗ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ನಡೆದ ಸಭೆಯಲ್ಲಿ ಜನರು ಮೋದಿ ಪರ ಜೈಕಾರ ಹಾಕುತ್ತಿದ್ದನ್ನು ಗಮನಿಸಿದ ಅವರು, "ನಮಗೆ ನಮ್ಮ ದೇಶ ಮುಖ್ಯವಾದದ್ದು, ಎಲ್ಲರೂ ಇಂಡಿಯಾ ಅಥವಾ ಭಾರತ ಎಂದು ಹೇಳೋಣ" ಎಂದು ತಿಳಿಸಿದರು.
"ಪಾಕಿಸ್ತಾನದಿಂದ ವಲಸೆ ಬಂದ ಹಿಂದೂಗಳು ಉತ್ತರ ಭಾರತದಲ್ಲಿ ಗುಡಿಸಲು ಹಾಕಿ ಜೀವನ ಮಾಡುತ್ತಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಈ ಸಂತ್ರಸ್ಥರನ್ನು ಭೇಟಿ ಮಾಡಿ ಮಾಡಿದ್ದು ಆ ಸಂದರ್ಭದಲ್ಲಿ ಸಂತ್ರಸ್ಥರು ಮೇಧಾ ಅವರಿಗೆ ನಾಲ್ಕು ದಿನ ಪಾಕಿಸ್ತಾನದಲ್ಲಿ ನೆಲೆಸುವಂತೆ ಸವಾಲು ಹಾಕಿ ಬುದ್ಧಿ ಕಲಿಸಿದ್ದಾರೆ" ಎಂದು ಹೇಳಿದರು.
"ಬಾಂಗ್ಲಾ ಪಾಕಿಸ್ತಾನದ ಮುಸ್ಲಿಮರಿಗೆ ಭಾರತದ ಪೌರತ್ವ ನೀಡಬೇಕೆಂದು ನಿಮ್ಮ ಇಚ್ಛೆಯಾದರೆ ಆ ದೇಶವನ್ನೇ ಭಾರತಕ್ಕೆ ಸೇರಿಸಿ. ಆ ಬಳಿಕ ಅವರಿಗೆ ಪೌರತ್ವವಲ್ಲದೇ ಅನ್ನ, ನೀರು ಎಲ್ಲವೂ ನೀಡುತ್ತೇವೆ" ಎಂದರು.
"ಇತಿಹಾಸಕಾರ ರಾಮಚಂದ್ರ ಗುಹಾ ಯಾರು ಎಂದು ಹಲವು ಜನರಿಗೆ ತಿಳಿದಿಲ್ಲ. ಯಾವತ್ತೂ ಹೋರಾಟಕ್ಕೆ ಬರದವರು ಮೊನ್ನೆ ಈ ಕಾಯ್ದೆ ವಿರುದ್ಧ ಹೋರಾಟ ಮಾಡಿ ಬಂಧನವಾಗಿದ್ದಾರೆ. ಆದರೆ ಅವರು ಯಾರು ಎಂದು ಹಲವರಿಗೆ ತಿಳದಿಲ್ಲ" ಎಂದು ವ್ಯಂಗ್ಯ ಮಾಡಿದರು.