ಬೆಂಗಳೂರು, ಡಿ 22 (Daijiworld News/MB) : "ಎದೆ ಸೀಳಿದರೆ ಎರಡಕ್ಷರ ಇಲ್ಲದಂತಹ, ಪಂಕ್ಚರ್ ಅಂಗಡಿ ಹಾಕಿಕೊಂಡಿರುವಂತವರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ" ಎಂಬ ವಿವಾದಾತ್ಮಕ ಹೇಳಿಕೆಯನ್ನು ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೀಡಿದ್ದಾರೆ.
ಬೆಂಗಳೂರಿನ ಟೌನ್ ಹಾಲ್ ಮುಂದೆ ನಡೆದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ ಅವರು,"ಈ ಕಾರ್ಯಕ್ರಮಕ್ಕೆ ಎದೆ ಸೀಳಿದರೆ ಎರಡಕ್ಷರ ಇಲ್ಲದಂತಹ, ಪಂಕ್ಚರ್ ಅಂಗಡಿ ಹಾಕಿಕೊಂಡಿರುವಂತವರು ಬಂದಿಲ್ಲ.ಈ ಕಾರ್ಯಕ್ರಮಕ್ಕೆ ಬಂದವರನ್ನು ಯಾರನ್ನೂ ಯಾರು ಕರೆದು ಬಂದಿಲ್ಲ. ಎಲ್ಲರೂ ಅವರವರ ಇಚ್ಛೆಯಿಂದ ಬಂದಿದ್ದಾರೆ. ಪೌರತ್ವಕ್ಕೆ ಬೆಂಬಲ ನೀಡುತ್ತಾರೆ ಎನ್ನುವುದಕ್ಕೆ ಇದೇ ಒಳ್ಳೆಯ ಸಾಕ್ಷಿ" ಎಂದು ಹೇಳಿದ್ದಾರೆ.
"ಕಾಂಗ್ರೆಸ್ ಸಾವಿನ ರಾಜಕೀಯ ನಡೆಸಲು ಮುಂದಾಗಿದೆ. ಕಾಯ್ದೆಯ ಕುರಿತು ತಪ್ಪು ಮಾಹಿತಿ ಹಬ್ಬುತ್ತಿದೆ. ಸಾರ್ವಜನಿಕರನ್ನು ತಪ್ಪು ಹಾದಿಗೆ ಎಳೆಯುತ್ತಿದೆ" ಎಂದು ದೂರಿದರು.
"ಹೊರದೇಶದ ಮುಸ್ಲಿಮರನ್ನು ಭಾರತದಲ್ಲಿ ವಾಸ ಮಾಡಲು ಬಿಡುವುದಿಲ್ಲ ಎಂದು ಹೇಳಿದರೆ ಇವರಿಗೆ ಏನು ಸಮಸ್ಯೆಯಾಗುತ್ತದೆ.ಇನ್ನು ಮಂಗಳೂರಿನಲ್ಲಿ ನಡೆದ ಇಬ್ಬರ ಸಾವಿಗೆ ಮಾಜಿ ಸಚಿವ ಯುಟಿ ಖಾದರ್ ಅವರೇ ಕಾರಣ. ನೀವು ಯುವಕರ ಜೀವದ ಜೊತೆ ಚೆಲ್ಲಾಟವಾಡಬೇಡಿ. ಖಾದರ್ನಂತೆ ನಾವು ಕೂಡಾ ಪ್ರಚೋದನಕಾರಿ ಭಾಷಣ ಮಾಡಿ ಜನರನ್ನು ಸೇರಿಸಿದರೆ ಅವರು ಉಳಿಯುವುದಿಲ್ಲ" ಎಂದು ಹೇಳಿದರು.
"ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಂದೇ ರೀತಿಯ ಮಾತಾನಾಡುತ್ತಾರೆ. ಇವರಿಬ್ಬರ ನಡುವೆ ಯಾವುದೇ ವ್ಯತ್ಯಾಸವಿಲ್ಲ" ಎಂದರು.
ಈ ಸಂದರ್ಭದಲ್ಲಿ ತೇಜಸ್ವಿಯವರು ಪಾಕಿಸ್ತಾನವನ್ನು ಪದೇ ಪದೇ ರಾಜ್ಯ ಎಂದು ಉಲ್ಲೇಖ ಮಾಡಿದ್ದು ಬಳಿಕ ಸಭೆಯಲ್ಲಿ ಉಪಸ್ಥತರಿದ್ದವರು ಅದು ರಾಷ್ಟ್ರ ಎಂದು ಹೇಳಿದಂತಹ ಘಟನೆ ನಡೆದಿದೆ.