ನವದೆಹಲಿ, ಡಿ 22 (DaijiworldNews/SM): ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತೀವ್ರವಾಗಿ ಖಂಡಿಸಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆಗೆ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯಿಂದ ಯಾವ ಕಾರಣಕ್ಕೆ ಭಯವಾಗುತ್ತಿದೆ ಎಂದು ಪ್ರಶ್ನಿಸಿ ದೀದಿಯವರ ಕಾಲೇಳೆದಿದ್ದಾರೆ.
ದೆಹಲಿಯ ರಾಮಲೀಲಾ ಮೈದಾನದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕೆಲ ವರ್ಷಗಳ ಹಿಂದೆ, ಸಂಸತ್ತಿನಲ್ಲಿ ಅವರು ಬಾಂಗ್ಲಾದೇಶದಿಂದ ಬಂಗಾಳಕ್ಕೆ ಬರುವ ಬಾಂಗ್ಲಾ ನುಸುಳುಕೋರರನ್ನು ತಡೆಯುವಂತೆ ಮೊರೆ ಇಡುತ್ತಿದ್ದರು. ಆದರೆ, ಬ್ಯಾನರ್ಜಿಯವರೇ ನಿಮಗೇನಾಯಿತು ಎಂದು ಮೋದಿ ಪ್ರಶ್ನಿಸಿದ್ದಾರೆ.
ಕಳೆದ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅನುಮೋದಿಸಲಾಗಿದೆ. ಜನರ ತೀರ್ಪನ್ನು ಮತ್ತು ಸಂಸತ್ತನ್ನು ಎಲ್ಲರೂ ಗೌರವಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಪ್ರಧಾನಿಯಾದ ನಂತರ ನಾನು ಮಾಡಿರುವ ಕೆಲಸಗಳನ್ನು ನೋಡಿ, ಗಮನಿಸಿ, ಪರೀಕ್ಷಿಸಿ ಎಂದು ಪ್ರತಿಪಕ್ಷದವರಿಗೆ ಪ್ರಧಾನಿ ನರೇಂದ್ರ ಮೋದಿ ಸವಾಲು ಹಾಕಿದ್ದಾರೆ.