ಬೆಂಗಳೂರು, ಡಿ 23 (Daijiworld News/MB) : ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಭಾನುವಾರ ಬೆಂಗಳೂರಿನ ಟೌನ್ ಹಾಲ್ ಮುಂದೆ ನಡೆದ ಜನಜಾಗೃತಿ ಕಾರ್ಯಕ್ರಮದಲ್ಲಿ "ಎದೆ ಸೀಳಿದರೆ ಎರಡಕ್ಷರ ಇಲ್ಲದಂತಹ, ಪಂಕ್ಚರ್ ಅಂಗಡಿ ಹಾಕಿಕೊಂಡಿರುವಂತವರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ" ಎಂದು ಹೇಳಿಕೆಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಖಂಡಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, "ತೇಜಸ್ವಿ ಸೂರ್ಯ ಎಂಬ ಜಾತಿವಾದಿ, ಶ್ರೇಷ್ಠತೆಯ ವ್ಯಸನಿಯ ಈ ಮಾತು ಖಂಡನಾರ್ಹ. ಪ್ರತಿಭಟಿಸುವ ಹಾಗೂ ಬದುಕುವ ಹಕ್ಕು ಜಾತಿ ಶ್ರೇಷ್ಠರಿಗೆ, ವಿದ್ಯೆ ಶ್ರೇಷ್ಠರಿಗೆ, ವರ್ಗ ಶ್ರೇಷ್ಠರಿಗೆ ಮಾತ್ರ ಇದೆ ಎಂಬ ಅಸಹ್ಯದ ಮಾತುಗಳಿವು. ಈ ಹೇಳಿಕೆಯಿಂದಾಗಿ ಶ್ರಮಿಕ ವರ್ಗ, ದಲಿತ, ಹಿಂದುಳಿದ ವರ್ಗ, ದುಡಿಯುವ ಜನರಿಗೆ ಅವಮಾನ ಮಾಡಲಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈ ಹೇಳಿಕೆಯಿಂದಾಗಿ ನಾಡಿನ ಜನತೆಗೆ ಅವಮಾನ ಮಾಡಲಾಗಿದೆ. ತಲ ಸಮುದಾಯದ ಮೇಲೆ ಶೋಷಣೆ ಮಾಡಿಕೊಂಡು, ವಿದ್ಯೆ, ಧಾರ್ಮಿಕ ಹಾಗೂ ಸಾಮಾಜಿಕ ಸಮಾನತೆಯ ವಿಚಾರದಲ್ಲಿ ವಂಚನೆ ಮಾಡಿಕೊಂಡು ಬಂದಿರುವ ಪಟ್ಟಭದ್ರ ಹಿತಾಸಕ್ತಿಯ ಮನಸ್ಥಿತಿಯ ತೇಜಸ್ವಿ ಈ ಹೇಳಿಕೆ ನೀಡಿರುವುದಕ್ಕೆ ಜನರಲ್ಲಿ ಕ್ಷಮೆ ಕೇಳಬೇಕು. ಈ ಹೇಳಿಕೆಯಿಂದ ಸಂವಿಧಾನದ ಆಶಯಗಳಿಗೆ ಅವಮಾನ ಮಾಡಲಾಗಿದೆ.
ಈ ಹೇಳಿಕೆಯನ್ನು ತೀವ್ರವಾಗಿ ಖಂಡನೆ ಮಾಡಿರುವ ಜೆಡಿಎಸ್ ಪಕ್ಷ, "ತೇಜಸ್ವಿಗೆ ಜ್ಞಾನದ ಅಹಂ ತಲೆಗೇರಿದೆ. ಅನಕ್ಷರಸ್ಥ ಶ್ರಮಿಕ ವರ್ಗ ಕೈಕಟ್ಟಿ ಕೂತರೆ ದೇಶದ ಪರಿಸ್ಥಿತಿ ಹೇಗಿರುತ್ತದೆ ಅನ್ನೋದು ಈ ಅಕ್ಷರಸ್ಥ ಸೂರ್ಯಗೆ ತಿಳಿದಿಲ್ಲವಾ? ಎಂದು ಪ್ರಶ್ನೆ ಮಾಡಿದ್ದಾರೆ.
ಅಕ್ಷರ ಜ್ಞಾನವಿಲ್ಲದವರು ಪ್ರತಿಭಟನೆ ಮಾಡಲು ಅರ್ಹರಲ್ಲ ಎಂದು ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ ನೀಡಿರುವ ಹೇಳಿಕೆಯನ್ನು ಜೆಡಿಎಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಶತಮಾನಗಳಿಂದ ತಳ ಸಮುದಾಯಗಳು ವಿದ್ಯೆಯಿಂದ ವಂಚನೆಗೊಳಗಾಗಿದ್ದು ಈ ಅನಕ್ಷರಸ್ಥರು ಪ್ರತಿಭಟನೆ ಮಾಡಬಾರದು ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೀಡಿರುವ ಹೇಳಿಕೆಗೆ ತಕ್ಷಣ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ.