ಚಿತ್ರದುರ್ಗ, ಡಿ 23(Daijiworld News/MSP): ಅನರ್ಹ ಶಾಸಕರು ಬಿಜೆಪಿಯಿಂದ ಗೆದ್ದು ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಅಸಮಾಧಾನಗೊಂಡಿರುವ ಬಿಜೆಪಿ ಶಾಸಕ ಗೂಳಿ ಹಟ್ಟಿ ಶೇಖರ್ ಬಿಜೆಪಿಗೆ ಸೆಡ್ಡು ಹೊಡೆಯಲು ತಯಾರಾಗಿದ್ದಾರೆ.
ತಮಗೆ ಸಚಿವ ಸ್ಥಾನ ಸಿಗುವುದಿಲ್ಲ ಎಂಬ ಬೇಸರ ಒಂದೆಡೆಯಾದ್ರೆ ತಮ್ಮ ಕ್ಷೇತ್ರದಲ್ಲಿ ಶಾಸಕರಾಗುವ ಬಯಕೆಯುಳ್ಳ ತಾಲೂಕಿನ ಬಿಜೆಪಿ ನಾಯಕರು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದು, ಪಕ್ಷದ ವರಿಷ್ಠರಲ್ಲಿ ಚಾಡಿ ಹೇಳುತ್ತಿದ್ದಾರೆ ಎಂದು ಇತ್ತೀಚೆಗೆ ಹೊಸದುರ್ಗದ ಬನಶಂಕರಿ ಭವನದಲ್ಲಿ ನಡೆದ ಸ್ವಾಭಿಮಾನಿ ಗೂಳಿಹಟ್ಟಿ ಶೇಖರ್ ಅಭಿಮಾನಿಗಳ ಬಳಗದಿಂದ ಪ್ರತ್ಯೇಕ ಸಭೆಯಲ್ಲಿ ಹೇಳಿಕೊಂಡಿದ್ದಾರೆ.
ಬಿಜೆಪಿಗೆ ಸರ್ಕಾರ ಬರಲು ಕಾರಣರಾದ ಅನರ್ಹ ಶಾಸಕರಿಗೆ ರೆಡ್ ಕಾರ್ಪೆಟ್ ಹಾಕಿ ಬಿಜೆಪಿ ನಾಯಕರು ಸ್ವಾಗತಿಸಿದ್ದೂ, ಹಣ, ಅಧಿಕಾರ ನೀಡುತ್ತಿದ್ದಾರೆ. ಆದರೆ ಈ ಹಿಂದೆ ಬಿಜೆಪಿ ಅಧಿಕಾರಕ್ಕೆ ಬರಲು ನಾನು ಕಾರಣನಾಗಿದ್ದೆ. ಹೀಗಾಗಿ ನನಗೆ ಮಾತ್ರ ತಾರತಮ್ಯ ಮಾಡುತ್ತಿದ್ದು ಅನರ್ಹ ಶಾಸಕರಲ್ಲೊ ಒಬ್ಬ ಎಂದು ಪರಿಗಣಿಸಿ ಸಚಿವ ಸ್ಥಾನ ನೀಡಲಿ ಎಂದು ಸಭೆಯಲ್ಲಿ ಅಸಮಾಧಾನ ತೊಡಿಕೊಂಡಿದ್ದಾರೆ.
ಹೊಸದುರ್ಗ ತಾಲೂಕು ಬಿಜೆಪಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ನಾಮಕಾವಸ್ಥೆಗೂ ಶಾಸಕರ ಅಭಿಪ್ರಾಯ ಕೇಳಿಲ್ಲ. ಮೂರು ವರ್ಷ ಎಷ್ಟೇ ಕಿರುಕುಳವಿದ್ದರೂ ಬಿಜೆಪಿಯಲ್ಲೇ ಇದ್ದು, ಮುಂದಿನ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧಿಸುವ ಬಗ್ಗೆ ಸಭೆಯಲ್ಲಿ ಓಲವು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.