ಬೆಂಗಳೂರು, ಡಿ 23(Daijiworld News/MSP): ಮಕ್ಕಳು ನೀರಿನ ಬಾಟಲ್ ಶಾಲೆಗೆ ಕೊಂಡೊಯ್ದರೂ ಸಮರ್ಪಕವಾಗಿ ನೀರು ಕುಡಿಯುದಿಲ್ಲ. ಇದಕ್ಕಾಗಿಯೇ ಕೇರಳ ಸರ್ಕಾರ ಜಾರಿಗೆ ತಂದ ವಾಟರ್ ಬೆಲ್ ಯೋಜನೆಯನ್ನು ಕರ್ನಾಟಕದಲ್ಲೂ ಕಟ್ಟುನಿಟ್ಟಾಗಿ ಜಾರಿಗೆ ತರಲು ಚಿಂತಿಸಿ ಶಾಲೆಗಳಲ್ಲಿ ನೀರಿನ ವಿರಾಮದ ಬೆಲ್ ಬಾರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ವಾಟರ್ ಬೆಲ್ ಯೋಜನೆ ಮಕ್ಕಳಲ್ಲಿ ನಿರ್ಜಲೀಕರಣ, ಉರಿಮೂತ್ರ, ವಾತ ಮುಂತಾದ ಸಮಸ್ಯೆಗಳ ನಿವಾರಣೆಗೆ ಸಹಕಾರಿಯಾಗಿದ್ದು, ಅವರ ಓದಿಗೆ ಪೂರಕ ವಾತಾವರಣ ಸೃಷ್ಟಿಸುವಂತೆ ಮಾಡುತ್ತದೆ. ಎಲ್ಲಾ ಶಾಲೆಗಳಲ್ಲೂ ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಬೆಳಗ್ಗೆ ಮತ್ತು ಮಧ್ಯಾಹ್ನ ಕಡ್ಡಾಯವಾಗಿ ನೀರಿನ ವಿರಾಮ (Water Bell) ನೀಡಲಾಗುತ್ತದೆ. ಸರ್ಕಾರದ ಆದೇಶದ ಪ್ರಕಾರ 10 ನಿಮಿಷಗಳ ಕಾಲ ವಿರಾಮ ಪಡೆಯಲಿದ್ದಾರೆ. ಸರ್ಕಾರದ ಈ ಆದೇಶ ಪೋಷಕರೂ ಸಂತಸಗೊಳ್ಳುವಂತೆ ಮಾಡಿದೆ.
ಸರ್ಕಾರದ ಆದೇಶ ಪ್ರತಿ ಜಿಲ್ಲೆಗೂ ರವಾನೆಯಾಗಲಿದೆ. ಶಾಲೆಗಳಲ್ಲಿ ಬೆಳಗಿನ ಎರಡು ಮತ್ತು ಮೂರನೇ ತರಗತಿಗಳ ನಡುವೆ ನೀರು ಕುಡಿಯಲು ಅವಕಾಶ ನೀಡಲಾಗುತ್ತದೆ. ಕಡಿಮೆ ನೀರಿನ ಸೇವನೆ, ನೀರಿನ ಕೊರತೆಯ ಮಕ್ಕಳಲ್ಲಿ ಬರಬಹುದಾದ ಆರೋಗ್ಯದ ಸಮಸ್ಯೆಗಳನ್ನು ತಡೆಗಟ್ಟಲು ಸರ್ಕಾರ ಈ ಕ್ರಮ ಕೈಗೊಂಡಿದೆ