ರಾಂಚಿ, ಡಿ 23 (DaijiworldNews/SM): ಜಾರ್ಖಂಡ್ ವಿಧಾನಸಭೆಗೆ ನಡೆದ ಐದು ಹಂತಗಳ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಜಾರ್ಖಂಡ್ ವಿಧಾನಸಭೆಯಿಂದ ಕಮಲ ಜಾರಿದೆ.
ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದುಕೊಂಡು ಸರಕಾರ ರಚನೆಗೆ ಸಿದ್ದಗೊಂಡಿದೆ.
ಜಾರ್ಖಂಡ್ ನ 81 ಕ್ಷೇತ್ರಗಳಿದ್ದು, ಪಕ್ಷವೊಂದಕ್ಕೆ ಅಧಿಕಾರಕ್ಕೇರಳು 41 ಮ್ಯಾಜಿಕ್ ನಂಬರ್ ಆಗಿದೆ. ಆದರೆ ಈ ಪೈಕಿ ಕಾಂಗ್ರೆಸ್, ಜೆಎಂಎ ಮೈತ್ರಿಕೂಟ ಸುಮಾರು 45 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಆಡಳಿತರೂಢ ಬಿಜೆಪಿ ಮೈತ್ರಿಕೂಟ 26 ಸ್ಥಾನಗಳನ್ನಷ್ಟೇ ಪಡೆದು ತೀವ್ರ ಮುಖಭಂಗ ಅನುಭವಿಸಿದೆ.
ಉಳಿದಂತೆ ಸರ್ಕಾರ ರಚನೆಯಲ್ಲಿ ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿದ್ದ ಎಜೆಎಸ್ ಯು ಪಕ್ಷ ಕೇವಲ 3 ಸ್ಥಾನಗಳನ್ನು ಮಾತ್ರವೇ ಪಡೆದರೆ, ಜೆವಿಎಂ ಕೂಡ ಕೇವಲ 3 ಕ್ಷೇತ್ರಗಳಲ್ಲಷ್ಟೇ ಗೆಲುವು ಸಾಧಿಸಿದೆ. ಇತರರು ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಇನ್ನು ಜಾರ್ಖಂಡ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದಿರುವ ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟದ ಮುಖ್ಯಮಂತ್ರಿಯಾಗಿ ಜೆಎಂಎಂ ಮುಖ್ಯಸ್ಥ ಹೇಮಂತ್ ಸೋರೆನ್ ಅವರು ಅಧಿಕಾರಕ್ಕೇರಳಿದ್ದಾರೆ. ಈಗಾಗಲೇ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಭರ್ಜರಿ ಸಿದ್ಥತೆ ನಡೆಸಿದ್ದಾರೆ.
ಜಾರ್ಖಂಡ ವಿಧಾನಸಭೆಯನ್ನು ಗಮನಿಸಿದಾಗ ವಿಶೇಷತೆಯೊಂದು ತಿಳಿಯುತ್ತದೆ. 2005 ಹಾಗೂ 2009 ರ ವಿಧಾನಸಭಾ ಚುನಾವಣೆಯಲ್ಲಿ ಮತದಾರು ಅತಂತ್ರ ಫಲಿತಾಂಶ ನೀಡಿದ್ದರು. ಬಳಿಕ 2014ರಲ್ಲಿ ಮೋದಿ ಅಲೆಗೆ ಮತದಾರರು ಅಸ್ತು ಎಂದಿದ್ದರು. ಆದರೆ, ಈ ಬಾರಿ ಬಿಜೆಪಿಗೆ ಮತದಾರರು ಕೈಕೊಟ್ಟಿದ್ದಾರೆ. ಜೆಎಂಎಂ, ಕಾಂಗ್ರೆಸ್ ಮೈತ್ರಿಕೂಟ ಜೈ ಎಂದಿದ್ದಾರೆ.