ಬೆಂಗಳೂರು, ಡಿ 24 (Daijiworld News/MB) : "ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೋಮವಾರ ಮಂಗಳೂರಿಗೆ ಬಂದಿದ್ದು ಈ ಸಂದರ್ಭ ಉಡುಪಿಗೆ ತೆರಳಿ ಆಸ್ಪತ್ರೆಗೆ ಭೇಟಿ ನೀಡಿ ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸಿದ್ಧರಾಮಯ್ಯ ಅವರ ಆರೋಗ್ಯದ ಕಾರಣದಿಂದಾಗಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು" ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
"ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಹಿನ್ನಲೆಯಲ್ಲಿ ಮೃತರ ಕುಟುಂಬಕ್ಕೆ ಭೇಟಿ ನೀಡಲು ಬಂದ ಸಿದ್ಧರಾಮಯ್ಯ ಅವರು ಈ ಸಂದರ್ಭದಲ್ಲಿ ಉಡುಪಿಗೆ ತೆರಳಲು ನಿರ್ಧಾರ ಮಾಡಿದ್ದರು. ಆದರೆ ಪ್ರವಾಸದಿಂದ ಸಿದ್ಧರಾಮಯ್ಯ ಅವರು ಸಂಪೂರ್ಣವಾಗಿ ಬಳಲಿದ್ದರು. ಅವರ ದೇಹಕ್ಕೆ ಸ್ಟಂಟ್ ಅಳವಡಿಸಲಾಗಿದೆ. ಇನ್ನು 2-3 ದಿನಗಳಲ್ಲಿ ಉಡುಪಿಗೆ ಬರಲಿದ್ದಾರೆ" ಎಂದು ತಿಳಿಸಿದ್ದಾರೆ.
"ಇನ್ನು 2-3 ದಿನದಲ್ಲಿ ಹೆಲಿಕಾಪ್ಟರ್, ವಿಶೇಷ ವಿಮಾನ ಮೂಲಕ ಸಿದ್ಧರಾಮಯ್ಯ ಅವರು ಉಡುಪಿಗೆ ಬರಲಿದ್ದಾರೆ. ದಯವಿಟ್ಟು ಸಣ್ಣತನದ ಆಲೋಚನೆಯನ್ನು ಯಾರೂ ಮಾಡಬೇಡಿ. ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕೃಷ್ಣ ಮಠಕ್ಕೆ ಭೇಟಿ ನೀಡದಿರುವುದು ವಿವಾದವಾಗಿತ್ತು. ಈ ಘಟನೆಯನ್ನು ಈ ಹಿಂದಿನ ಘಟನೆಯೊಂದಿಗೆ ತಳುಕು ಹಾಕಬೇಡಿ" ಎಂದು ವಿನಂತಿಸಿದರು.