ಬೆಂಗಳೂರು, ಡಿ 24 (Daijiworld News/PY) : ಉಪಚುನಾವಣೆಯಲ್ಲಿ ಸೋಲುಕಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ಪಕ್ಷ ಖಾಲಿ ಖಾಲಿ ಅನಿಸುತ್ತಿದ್ದು, ಇದೀಗ ಹೊಸ ನಾಯಕರ ನೇಮಕಾತಿ ಮಾಡಲು ಕಾಯುತ್ತಿದೆ.
ಕಾಂಗ್ರೆಸ್ ಪಕ್ಷದಲ್ಲಿ ಇದೀಗ ಖಾಲಿ ಇರುವ ಹುದ್ದೆಗಳಿಗಾಗಿ ನೇಮಕಾತಿ ಮಾಡುವ ಕೆಲಸ ಆರಂಭವಾಗಿದ್ದು, ಸಂಕ್ರಾತಿ ಬಳಿಕ, ಅಂದರೆ ಜನವರಿ 15ರ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಹೊಸ ನಾಯಕರನ್ನು ನೇಮಕಾತಿ ಮಾಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ.
ಸಂಕ್ರಾತಿಯ ಮುಂಚಿನ ದಿನಗಳು ಶೂನ್ಯಮಾಸವಾದ ಕಾರಣದಿಂದ ಈ ಸಂದರ್ಭ ಯಾವುದೇ ರಾಜಕೀಯ ಪಕ್ಷಗಳು ನೂತನವಾದ ಕೆಲಸಗಳನ್ನು ಮಾಡುವುದಿಲ್ಲ, ಬಿಜೆಪಿ ಪಕ್ಷಗಳು ಸಂಪುಟ ವಿಸ್ತರಣೆಯ ಕೆಲಸವನ್ನು ಮುಂದಕ್ಕೆ ಹಾಕಿದೆ ಎಂದು ತಿಳಿದು ಬಂದಿದೆ.
ಈ ನಡುವೆ ಒಕ್ಕಲಿಗ ಸಮಾಜದ ನಾಯಕ ಡಿಕೆ.ಶಿವಕುಮಾರ್, ದಲಿತ ಸಮುದಾಯ ನಾಯಕ ಕೆ.ಹೆಚ್.ಮುನಿಯಪ್ಪ ಹಾಗೂ ಲಿಂಗಾಯುತ ನಾಯಕ ಎಂ.ಬಿ.ಪಾಟೀಲ್ ಅವರ ನಡುವೆ ಪೈಪೋಟಿ ಎದುರಾಗಿದ್ದೂ, ಈ ಮೂವರಲ್ಲಿ ಯಾರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಒಲಿದು ಬರಲಿದೆ ಎಂಬುದನ್ನು ನಿರೀಕ್ಷಿಸಬೇಕಿದೆ.
ನೂತನ ನಾಯಕರ ನೇಮಕಾತಿ ಬಗ್ಗೆ 50 ಶಾಸಕರಿಂದ ಹಾಗೂ ನಾಯಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದು, ಈ ಅಭಿಪ್ರಾಯಗಳನ್ನು ಹೈಕಮಾಂಡ್ನ ಗಮನಕ್ಕೆ ತರಲಿದೆ. ಇದಾದ ಬಳಿಕ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಸಿದ್ದರಾಮಯ್ಯ ನೀಡಿರುವ ರಾಜೀನಾಮೆಯನ್ನು ಕಾಂಗ್ರೆಸ್ ಹೈಕಮಾಂಡ್ ಅಂಗೀಕರಿಸುತ್ತದೆಯೇ ಎಂಬ ಪ್ರಶ್ನೆಗಳೂ ಮೂಡುತ್ತಿವೆ.
ಇನ್ನು ಮುಂದಿನ ಅಧಿವೇಶನ ಪ್ರಾರಂಭವಾಗುವ ಮುನ್ನ ಹಾಗೂ ಜನವರಿ 20ರ ಮೊದಲೇ ನೂತನ ನಾಯಕರ ನೇಮಕಾತಿ ಆಗುವ ಸಾಧ್ಯತೆ ಇದೆ.
ನೂತನ ನಾಯಕರ ಬಗ್ಗೆ ಮಾಹಿತಿ ನೀಡಿದ ಕಾಂಗ್ರೆಸ್ ಮೂಲಗಳು, ರಾಷ್ಟ್ರೀಯ ನಾಯಕತ್ವ ಪಕ್ಷದ ಅಭಿವೃದ್ದಿಗಾಗಿ ಬಲಿಷ್ಠ ನಾಯಕರನ್ನು ನೇಮಕ ಮಾಡಲು ನಿರ್ಧರಿಸಿದೆ ಎಂದು ತಿಳಿಸಿದೆ.