ಮುಂಬೈ, ಡಿ 24(Daijiworld News/MSP): ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಬಗ್ಗೆ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ವ್ಯಕ್ತಿಗೆ ಶಿವಸೇನಾ ನಾಯಕರು ಅಪಮಾನಿಸಿ ತಲೆ ಬೋಳಿಸಿ, ಹಲ್ಲೆ ಮಾಡಿರುವ ಘಟನೆ ಮುಂಬೈನಲ್ಲಿ ವಾಡ್ಲಾದಲ್ಲಿ ನಡೆದಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ವೇಳೆ ದೆಹಲಿಯ ಜಾಮಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳ ಮೇಲೆ ಪೊಲೀಸರು ತೆಗೆದುಕೊಂಡ ಕ್ರಮವನ್ನು ಖಂಡಿಸಿ ಮಾತನಾಡಿದ್ದ ಉದ್ಧವ್ ಠಾಕ್ರೆ ಈ ಘಟನೆಯನ್ನು ಜಲಿಯನ್ವಾಲಾ ಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದ್ದರು.
ಇದನ್ನು ವಿರೋಧಿಸಿ ಹಿರಾಮಣಿ ತಿವಾರಿ ಎಂಬಾತ ಅವಹೇಳಕಾರಿಯಾಗಿ ಪೋಸ್ಟ್ ಹಾಕಿದ್ದ. ಈತನನ್ನು ಪತ್ತೆಹಚ್ಚಿದ ಶಿವಸೇನಾ ಕಾರ್ಯಕರ್ತರು ಅವರನ್ನು ಮನೆಯಿಂದ ಹೊರಗೆ ಕರೆತಂದು ನಿಂದಿಸಿ, ಹಲ್ಲೆ ಮಾಡಿದ್ದಾರೆ. ಅಲ್ಲದೆ ಬಲವಂತವಾಗಿ ತಲೆಬೋಳಿಸಿದ್ದಾರೆ.
ಈ ಪ್ರಕರಣದ ಕುರಿತು ವಾಡ್ಲಾ ಪೊಲೀಸರು ಹಿರಾಮಣಿ ಹಾಗೂ ಶಿವಸೇನೆ ಕಾರ್ಯಕರ್ತರಿಗೆ ನೋಟಿಸ್ ನೀಡಿದ್ದಾರೆ. ಕಾನೂನು ಕೈಗೆತ್ತಿಕೊಳ್ಳುವ ಪ್ರಯತ್ನ ಮಾಡದಂತೆ ಇಬ್ಬರಿಗೂ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
" ಉದ್ಧವ್ ಠಾಕ್ರೆ ಬಗ್ಗೆ ಪೋಸ್ಟ್ ಹಾಕಿದ ಬಳಿಕ ಬೆದರಿಕೆ ಕರೆ ಬರತೊಡಗಿದ್ದು, ನಾನು ಪೋಸ್ಟ್ ಡಿಲೀಟ್ ಮಾಡಿದ್ದೆ. ಆದರೆ ಇದೀಗ ಶಿವಸೇನೆ ಕಾರ್ಯಕರ್ತರು ಮನೆ ಬಳಿ ಬಂದು ನನ್ನ ಹೊರಗೆಳೆದು ಹಲ್ಲೆ ನಡೆಸಿ ತಲೆಬೋಳಿಸಿದ್ದಾರೆ. ಹಲ್ಲೆಯಿಂದ ಕಿವಿತಮಟೆಗೆ ಹಾನಿಯಾಗಿರುವುದನ್ನು ವೈದ್ಯರು ದೃಡಪಡಿಸಿದ್ದು ಪೊಲೀಸರು ಇದರ ವಿರುದ್ದ ಕಠಿಣ ಕ್ರಮ ಜರಗಿಸಿಬೇಕು. ನಾನು ದೂರು ನೀಡಿದ್ದು, ನನಗೂ ಪೊಲೀಸರು ನೊಟೀಸ್ ನೀಡಿದ್ದಾರೆ ಎಂದು ಹಿರಾಮಣಿ ತಿವಾರಿ ಹೇಳಿದ್ದಾರೆ.