ಬಾಗೇಪಳ್ಳಿ, ಡಿ 24 (Daijiworld News/MB) : ಮೊಬೈಲ್ ಬಳಕೆ ಮಾಡುವ ಚಟ ಹತ್ತಿಸಿಕೊಳ್ಳಬೇಡ ಎಂದು ಬುದ್ಧಿ ಮಾತು ಹೇಳಿದ ಕಾರಣಕ್ಕೆ ಬಾಲಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿದ ಘಟನೆ ಇಲ್ಲಿನ ಚೇಳೂರು ಹೋಬಳಿಯ ಮಂಡ್ಯಪಲ್ಲಿಯಲ್ಲಿ ನಡೆದಿದೆ.
ಬಾಲಕ ಯಶ್ವಂತ್ (15) ಚೇಳೂರು ಆಂಗ್ಲ ಅರವಿಂದ ಪ್ರೌಡಶಾಲೆಯಲ್ಲಿ 9 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.
ಭಾನುವಾರ ರಜಾದಿನವಾದ ಕಾರಣದಿಂದ ಮನೆಯಲ್ಲಿಯೇ ಇದ್ದ ಬಾಲಕ ತನ್ನ ಅಕ್ಕನ ಬಳಿ ಮೊಬೈಲ್ ಕೇಳಿದ್ದಾನೆ. ಪಬ್ಜಿ, ಟಿಕ್ಟಾಕ್ ಚಟವನ್ನು ಬೆಳೆಸಿಕೊಳ್ಳಬೇಡ, ಮೊಬೈಲ್ ಕೊಡುವುದಿಲ್ಲ ಎಂದು ಹೇಳಿದ್ದಕ್ಕೆ ಮನೆಯಲ್ಲಿ ಇಟ್ಟಿದ್ದ ಗಿಡಗಳಿಗೆ ಸಿಂಪಡಿಸುವ ಕ್ರಿಮಿನಾಶಕ ವಿಷವನ್ನು ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಸಂದರ್ಭದಲ್ಲಿ ಬಾಲಕನ ತಂದೆಗೆ ಅನಾರೋಗ್ಯವಾಗಿದ್ದ ಕಾರಣ ತಂದೆ ಹಾಗೂ ತಾಯಿ ಚಿಂತಾಮಣಿಗೆ ತೆರಳಿದ್ದರು. ವಿಷ ಸೇವನೆ ಮಾಡಿ ಒದ್ದಾಡುತ್ತಿದ್ದ ಬಾಲಕನನ್ನು ಸ್ಥಳೀಯರು ಗಮನಿಸಿದ್ದು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆತನ ಸ್ಥಿತಿ ಗಂಭೀರವಾಗಿದ್ದ ಹಿನ್ನಲೆಯಲ್ಲಿ ಬೇರೆ ಆಸ್ಪತ್ರೆಗೆ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಬಾಲಕ ಮೃತಪಟ್ಟಿದ್ದಾನೆ.