ಮೈಸೂರು, ಡಿ 24 (Daijiworld News/PY) : 'ಮಂಗಳೂರಿನಲ್ಲಿ ಪೌರತ್ವ ಮಸೂದೆಯ ವಿರುದ್ದ ನಡೆದ ಹಿಂಸಾಚಾರವು ಸಿದ್ದರಾಮಯ್ಯ ಸೃಷ್ಟಿ ಮಾಡಿರುವ ಮರಿ ಟಿಪ್ಪುಗಳಿಂದಾದ ಕೆಟ್ಟ ಕೆಲಸ' ಎಂದು ಸಂಸದ ಪ್ರತಾಪ ಸಿಂಹ ಹೇಳಿಕೆ ನೀಡಿದ್ದಾರೆ.
ಗಲಭೆ ನಡೆದ ವಿಡಿಯೋ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಹಿಂಸಾಚಾರದ ವೇಳೆ ಕಲ್ಲುಗಳನ್ನು ತಂದು ಎಸೆದಿದ್ದಾರೆ, ಐಸಿಯೂ ಒಳಗಡೆ ಹೋಗಿಯೂ ಗದ್ದಲ ಮಾಡಿದ್ದಾರೆ. ಇಂತಹ ಕಾರ್ಯಗಳನ್ನು ಮಾಡುವುದು ಟಿಪ್ಪು ವಂಶಸ್ಥರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ವೇಳೆ ಕಲ್ಲು ತೂರಿದವರನ್ನು ಸಿದ್ದರಾಮಯ್ಯ ಅಮಾಯಕರು ಎಂದಿದ್ದಾರೆ, ಈ ಘಟನೆಯ ಬಗ್ಗೆ ಸ್ಪಷ್ಟವಾಗಿ ತಿಳಿಯಬೇಕಾದರೆ ಸಿಸಿಟಿವಿ ದೃಶ್ಯ ನೋಡಿ ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್ ಮಾತನಾಡಲಿ ಎಂದು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್ ಮಂಗಳೂರಿಗೆ ಒಳ್ಳೆಯ ಕಾರ್ಯವನ್ನು ಮಾಡಲು ಹೋಗಿರಲಿಲ್ಲ, ಬದಲಾಗಿ ತಾವು ಸೃಷ್ಟಿಸಿರುವ ಮರಿಟಿಪ್ಪುಗಳು ಮಾಡಿರುವ ತಪ್ಪುಗಳನ್ನು ಮುಚ್ಚಿಹಾಕಲು ಹೋಗುತ್ತಿದ್ದರು, ಪ್ರತಿಭಟನೆ ನಡೆಯುತ್ತಿದ್ದ ವೇಳೆ ಕಲ್ಲಿನಿಂದ ಹೊಡೆದರೆ ಜನರು ಉಳಿಯುತ್ತಾರಾ, ತಮ್ಮ ಪ್ರಾಣಕ್ಕೆ ಅಪಾಯ ಉಂಟಾಗುತ್ತಿದ್ದರೂ ಪೊಲೀಸರು ಜನರನ್ನು ರಕ್ಷಣೆ ಮಾಡಿದ್ದಾರೆ ಎಂದರು.
ಸಾರ್ವಜನಿಕ ಆಸ್ತಿ-ಪಾಸ್ತಿ ಮಾಡುವ ಜನರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಿ, ಈ ಬಗ್ಗೆ ಸುರೇಶ್ ಅಂಗಡಿ ಹೇಳಿರುವ ಹೇಳಿಕೆಗೆ ನಾನು ಬದ್ದ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.