ಬೆಂಗಳೂರು, ಡಿ 24(Daijiworld News/MSP): ಸಿನಿಮೀಯ ಶೈಲಿಯಲ್ಲಿ ಮುತ್ತೂಟ್ ಫೈನಾನ್ಸ್ ಮಳಿಗೆಯಿಂದ ಬರೋಬ್ಬರಿ 16 ಕೋಟಿ ಮೌಲ್ಯದ ಸುಮಾರು 70 ಕೆಜಿ ಚಿನ್ನವನ್ನು ದರೋಡೆ ಮಾಡಿರುವ ಘಟನೆ ವರದಿಯಾಗಿದೆ.
ಮುತ್ತೂಟ್ ಫೈನಾನ್ಸ್ನ ಕಚೇರಿಯ ಬಾತ್ರೂಮ್ನಿಂದ ಕನ್ನ ಕೊರೆದು ದರೋಡೆಕೋರರು ಸುಮಾರು 70 ಕೆಜಿ ಚಿನ್ನಾಭರಣವನ್ನು ದೋಚಿದ್ದಾರೆ. ಪುಲಕೇಶಿನಗರ ಠಾಣೆ ವ್ಯಾಪ್ತಿಯ ಹೆಣ್ಣೂರು -ಬಾಣಸವಾಡಿ ರಸ್ತೆಯ ಲಿಂಗರಾಜಪುರಂನ ಮುತ್ತೂಟ್ ಫೈನಾನ್ಸ್ ನಲ್ಲಿ ಡಿ.21 ರಂದು ಈ ಕೃತ್ಯ ನಡೆದಿದೆ.
ಚಿನ್ನವನ್ನು ಅಡವಿಗಿರಿಸಿ ಹಣ ನೀಡುತ್ತಿದ್ದ ಮುತ್ತೂಟ್ ಫೈನಾನ್ಸ್ ಇಲ್ಲಿ ಅವಧಿ ಮೀರಿದ್ದ ಚಿನ್ನಾಭರಣಗಳು ಸೇರಿದಂತೆ ಸಾರ್ವಜನಿಕರು ಇಟ್ಟ ಒಡವೆಗಳನ್ನು ದಾಸ್ತಾನು ಇರಿಸಿಕೊಂಡಿತ್ತು.
ಬಾತ್ ರೂಮ್ ಮೂಲಕ ಕನ್ನ ಕೊರೆದ ದರೋಡೆಕೋರರು ಬೀರು, ಕಬೋರ್ಡ್ಗಳನ್ನು ಗ್ಯಾಸ್ ಕಟ್ಟರ್ ಮೂಲಕ ಕತ್ತರಿಸಿ ಚಿನ್ನ ದೋಚಿದ್ದಾರೆ. ದರೋಡೆಗೂ ಮುನ್ನ ದುಷ್ಕರ್ಮಿಗಳು ಸಿಸಿಟಿವಿ ಸಂಪರ್ಕವನ್ನು ಕಡಿತಗೊಳಿಸಿರುವುದು ಕಂಡು ಬಂದಿದೆ. ಪುಲಕೇಶಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ದರೋಡೆಕೋರರನ್ನು ಪತ್ತೆ ಹಚ್ಚಲು ವಿಶೇಷ ಪೊಲೀಸ್ ತಂದಗಳನ್ನು ರಚಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಎಸ್.ಟಿ ಶರಣಪ್ಪ ತಿಳಿಸಿದ್ದಾರೆ.