ಬೆಂಗಳೂರು, ಡಿ 24 (Daijiworld News/PY) : ಪೌರತ್ವ ಮಸೂದೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಾಗೂ ಹಿಂಸಾಚಾರದ ಪ್ರಕರಣಕ್ಕೆ ಹಿನ್ನೆಲೆ ಪೊಲೀಸ್ ಇಲಾಖೆ ಮಂಗಳವಾರ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆಗೊಳಿಸಿತ್ತು, ಈ ವಿಚಾರದ ಬಗ್ಗೆ ಟ್ವೀಟ್ ಮಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಆರೋಪಿಸಿದ್ದಾರೆ.
ಮಂಗಳೂರನ್ನು ಕೋಮು ಪ್ರಯೋಗಶಾಲೆ ಮಾಡಿಕೊಂಡಿರುವ ಬಿಜೆಪಿ ಇಬ್ಬರು ಅಮಾಯಕರನ್ನು ಬಲಿ ತೆಗೆದುಕೊಂಡಿದ್ದು ಹೇಗೆ? ಮತ್ತು ಏಕೆ? ದಾಂಧಲೆಕೋರರಿಗೆ ಗುಂಡಿಕ್ಕಿದ್ದೇವೆ ಎನ್ನುವ ರಾಜ್ಯ ಸರ್ಕಾರ ಅವರಿಗೆ ಪರಿಹಾರ ಏಕೆ ಘೋಷಿಸಿತು? ಎಂದು ಎಚ್ ಡಿಕೆ ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.
ಮಂಗಳೂರಿನ ಪ್ರತಿಭಟನೆ ವೇಳೆ ಸೈಜುಗಲ್ಲುಗಳನ್ನು ತಂದ ವಿಡಿಯೋಗಳನ್ನು ಇಷ್ಟೊಂದು ತಡವಾಗಿ ಬಿಡುಗಡೆಗೊಳಿಸುತ್ತಿರುವ ಸರ್ಕಾರ ಅದಕ್ಕೆ ಸಂಬಂಧಿಸಿದಂತೆ ಯಾರನ್ನು ಬಂಧಿಸಿದೆ? ಎಷ್ಟು ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದೆ? ಕಲ್ಲು ತೂರಾಟಕ್ಕೆ ತಂದ ವಾಹನಗಳ ವಿಡಿಯೋ ಮಂಗಳೂರಿನ ಗಲಭೆಯದೋ? ಅಥವಾ ಬೇರೆಡೆಯದೋ? ಎಂದು ಕುಮಾರಸ್ವಾಮಿ ಟ್ವೀಟ್ ನಲ್ಲಿ ಕೇಳಿದ್ದಾರೆ.
ವಿರೋಧ ಪಕ್ಷದ ಸದಸ್ಯನಾಗಿ ನಾನು, ಕಾನೂನು ವ್ಯವಸ್ಥೆಗೆ ಯಾವುದೇ ಕೆಡುಕು ತರುವ ರೀತಿಯಲ್ಲಿ ಸರ್ಕಾರದ ಪೊಲೀಸರೇ ಷಡ್ಯಂತ್ರ ನಡೆಸಿದರೆ ಸುಮ್ಮನೆ ಇರುವುದಿಲ್ಲ, ಇಂತಹ ಹಿಂಸಾತ್ಮಕ ಪ್ರತಿಭಟನೆಗೆ ನಾನು ಬೆಂಬಲ ನೀಡುವುದಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶಿಸಿದ್ದಾರೆ.
ಸಿಎಎ ಮತ್ತು ಎನ್ ಆರ್ ಸಿ ಬಗ್ಗೆ ಮೋದಿ ಮತ್ತು ಅಮಿತ್ ಶಾ ಹೇಳಿಕೆಗಳು ಹೋಲಿಕೆಯಾಗುತ್ತಿಲ್ಲ, ಬಿಜೆಪಿ ಅಂಗ ಪಕ್ಷಗಳೇ ಸಿಎಎಯನ್ನು ವಿರೋಧಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಟ್ವೀಟ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.