ಮುಂಬೈ, ಡಿ 24 (Daijiworld News/PY) : ಪ್ರಾಂಶುಪಾಲೆಯೊಬ್ಬರು 16ರ ಹರೆಯದ ಶಾಲಾ ವಿದ್ಯಾರ್ಥಿನಿಯ ಮೇಲೆ ಆಸಿಡ್ ಎರಚಿದ ಘಟನೆ ಮುಂಬೈಯಲ್ಲಿ ಭಾನುವಾರ ನಡೆದಿದೆ.
ಭಾನುವಾರ ಬೆಳಿಗ್ಗೆ ವಿದ್ಯಾರ್ಥಿನಿಯು ರಸ್ತೆಯಲ್ಲಿ ನಡೆದುಕೊಂಡು ಹೋಗುವ ಸಂದರ್ಭ ಮುಂಬೈನ ಉಪನಗರ ಕಾಂಜುರ್ಮಾರ್ಗ್ನಲ್ಲಿ ಈ ಘಟನೆ ನಡೆದಿದೆ. ಆಸಿಡ್ ಎರಚಿದ ಪರಿಣಾಮ ವಿದ್ಯಾರ್ಥಿನಿಯ ಮೈಮೇಲೆ ಸುಟ್ಟ ಗಾಯಗಳಾಗಿವೆ.
"ಮುಂಜಾನೆ 6 ಗಂಟೆಯ ವೇಳೆ ವಾಕಿಂಗ್ ಹೊರಟಾಗ ನನಗೆ 10ನೇ ತರಗತಿಯ ಪಾಠ ಮಾಡುತ್ತಿದ್ದ ಪ್ರಾಂಶುಪಾಲರ ಸಹಿತ ನಾಲ್ವರು ಶಿಕ್ಷಕರು ಎಂಎಚ್ಡಿಏ ಕಾಲೋನಿ ಗೇಟ್ನ ಬಳಿ ನಿಂತಿದ್ದರು. ಆ ಬಳಿಕ ಪ್ರಾಂಶುಪಾಲೆ ನನ್ನ ಮೇಲೆ ದ್ರಾವಣವೆರಚಿದ್ದು, ನಿನ್ನ ಸಹೋದರ,ಸಹೋದರಿಗೂ ಇದೇ ರೀತಿ ಮಾಡುವುದಾಗಿ ಬೆದರಿಕೆ ಹಾಕಿ ಕಾರು ಹತ್ತಿ ಪರಾರಿಯಾಗಿದ್ದಾರೆ" ಎಂದು ಆರೋಪಿಸಿದ್ದಾರೆ.
"ಪ್ರಾಂಶುಪಾಲೆ ಹಾಗೂ ಮೂವರು ಶಿಕ್ಷಕರು ಮಗಳ ಎದೆ ಹಾಗೂ ಕಾಲಿನ ಮೇಲೆ ಆಸಿಡ್ ಎರಚಿದ್ದಾರೆ, ಈ ಬಗ್ಗೆ ಮಗಳು ನನಗೆ ಫೋನ್ನಲ್ಲಿ ತಿಳಿಸಿದ ತಕ್ಷಣವೇ ನಾವು ಅಲ್ಲಿಗೆ ಧಾವಿಸಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ಈ ಹಿಂದೆ 10ನೇ ತರಗತಿಯಲ್ಲಿದ್ದಾಗ ಶಿಕ್ಷಕರು ಶಿಕ್ಷೆ ವಿಧಿಸಿದ್ದಕ್ಕಾಗಿ ಶಿಕ್ಷಕರ ವಿರುದ್ದ ದೂರು ದಾಖಲಿಸಿದ್ದರಿಂದ ಮಗಳ ಮೇಲೆ ಈ ಹಲ್ಲೆ ನಡೆಸಿದ್ದಾರೆ" ಎಂದು ಬಾಲಕಿಯ ತಾಯಿ ಹೇಳಿದ್ದಾರೆ.
ಆಸಿಡ್ ದಾಳಿಗೆ ಒಳಗಾದ ಯುವತಿಯು, ಮಹೀಮ್ನ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಓದುತ್ತಿದ್ದಾಳೆ.
ಆಸಿಡ್ ಎರಚಿದ ಭಂಡಪ್ ಶಾಲೆಯ ಪ್ರಾಂಶುಪಾಲೆ ಹಾಗೂ ಶಾಲಾ ಇಬ್ಬರು ಸಿಬ್ಬಂದಿ ಸೇರಿದಂತೆ ಇತರ ಮೂವರ ಮೇಲೆ ಎಫ್ಐಆರ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.