ಬೆಂಗಳೂರು, ಡಿ 25(Daijiworld News/MB) : ಎಂಬತ್ತರ ದಶಕದಲ್ಲಿ ಎಚ್.ಡಿ. ದೇವೇಗೌಡ ಹಾಗೂ ಎಸ್.ಆರ್. ಬೊಮ್ಮಾಯಿ ಕಾಂಗ್ರೆಸ್ ಸೇರುವ ಬಯಕೆ ವ್ಯಕ್ತಪಡಿಸಿದ್ದರು. ಆಟೋರಿಕ್ಷಾದಲ್ಲಿ ನನ್ನ ಮನೆಗೆ ಬಂದಿದ್ದ ಗೌಡರು, ‘ವಿರೋಧ ಪಕ್ಷದಲ್ಲಿ ಒಗ್ಗಟ್ಟಿಲ್ಲ, ಒಂದು ನೀತಿ ಇಲ್ಲ. ನಾನು ಕಾಂಗ್ರೆಸ್ ಸೇರುವ ಮನಸ್ಸು ಮಾಡಿದ್ದೇನೆ’ ಎಂಬುದಾಗಿ ಹೇಳಿದ್ದರು ಎಂಬುದು ಬಿಜೆಪಿಯ ಹಿರಿಯ ರಾಜರಾರಣಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಂದರ್ಶನ ಆಧಾರಿತ ಪುಸ್ತಕದಲ್ಲಿ ಉಲ್ಲೇಖಿಸಲಾಗಿದ್ದು ಈಗ ಸುದ್ದಿಯಾಗುತ್ತಿದೆ.
ಈ ಪುಸ್ತಕವು ಜನವರಿ 4 ರಂದು ಬಿಡುಗಡೆಯಾಗಲಿದ್ದು ಇದರಲ್ಲಿ ದೇವೆಗೌಡ ಮತ್ತು ಬೊಮ್ಮಾಯಿ- ಕಾಂಗ್ರೆಸ್ ಸೇರುವ ಬಯಕೆ ಎಂಬ ಅಧ್ಯಾಯದಲ್ಲಿ ಆ ಕಾಲದ ರಾಜಕೀಯ ವಿದ್ಯಮಾನಗಳ ಕುರಿತು ಎಸ್ಎಂ ಕೃಷ್ಣ ಅವರು ವಿವರಿಸಿರವುದನ್ನು ಮುದ್ರಣ ಮಾಡಲಾಗಿದೆ.
ಪುಸ್ತಕದಲ್ಲಿ ಇರುವುದು ಏನು?
80 ದಶಕದಲ್ಲಿ ಜನತಾ ಪಕ್ಷದ ಪ್ರಧಾನಿ ಚರಣ ಸಿಂಗ್ ಅವರು ವಿಶ್ವಾಸ ಮತ ಯಾಚನೆಗಾಗಿ ಲೋಕಸಭೆಯ ತುರ್ತು ಅಧಿವೇಶನ ಕರೆದಿದ್ದರು. ವಿಐಪಿ ಗ್ಯಾಲರಿಯಲ್ಲಿದ್ದ ನನ್ನ ಜತೆ ದೇವೆಗೌಡ, ಬೊಮ್ಮಾಯಿ ಕೂಡ ಇದ್ದರು. ವಿಶ್ವಾಸ ಮತ ಸಾಬೀತುಪಡಿಸಲಾಗದೇ ಚರಣಸಿಂಗ್ ರಾಜೀನಾಮೆ ಕೊಟ್ಟರು. ಬಳಿಕ ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ಕಾಫಿ ಕುಡಿಯುವಾಗ 'ದೇವೆಗೌಡ್ರೆ, ಬೊಮ್ಮಾಯಿ ಸಾಹೇಬರೇ ತಾವುಗಳು ಇನ್ನೂ ಏಕೆ ಜನತಾ ಪಾರ್ಟಿ ಅಂತ ಬಡಿದಾಡುತ್ತೀರ. ಈಗಾಗಲೇ ಕಾಂಗ್ರೆಸ್ ಸೇರಿರುವ ಚರಣಸಿಂಗ್ರಂತಹ ನಾಯಕರನ್ನು ಕಟ್ಟಿಕೊಂಡು ಏನು ಮಾಡಲು ಸಾಧ್ಯ. ನಿಮ್ಮ ರಾಜಕೀಯ ಭವಿಷ್ಯವನ್ನು ಪುನರ್ ಚಿಂತನೆ ಮಾಡಬೇಕು' ಎಂದು ಒತ್ತಾಯಿಸಿದೆ. ಇಬ್ಬರೂ ಸಮ್ಮತಿಸಿದರು. ಪ್ರಣವ್ ಮುಖರ್ಜಿ ಅವರನ್ನು ಒಪ್ಪಿಸಲಾಯಿತು. ಇಂದಿರಾಗಾಂಧಿಯವರಿಗೆ ರಿಪೋರ್ಟ್ ಮಾಡಲೇ ಎಂದು ಪ್ರಣವ್ ಮುಖರ್ಜಿ ಕೇಳಿದಾಗ, ಇಬ್ಬರೂ ನಾಯಕರೂ ಒಪ್ಪಿದರು. ಬೆಂಗಳೂರಿಗೆ ಹೋಗಿ ಒಡನಾಡಿಗಳನ್ನು ಸಂಪರ್ಕಿಸಿ ನಿರ್ಣಯವೊಂದನ್ನು ತಮಗೆ ಕಳುಹಿಸುತ್ತೇವೆ ಎಂದು ಹೇಳಿದರು. ಒಮ್ಮತದ ನಿರ್ಣಯಕ್ಕೆ ಬರಲು ಅವರಿಗೆ ಸಾಧ್ಯವಾಗದೇ ಹೋಗಿರಬಹುದು. ಸರಿಯಾಗಿ ಪ್ಲಾನ್ ಮಾಡಿದ್ದರೆ ವೀರೇಂದ್ರ ಪಾಟೀಲರಂತೆ ದೇವೇಗೌಡ, ಬೊಮ್ಮಾಯಿ ಇಬ್ಬರೂ ಆ ಕಾಲದಲ್ಲೇ ಕಾಂಗ್ರೆಸ್ ಸೇರಿಬಿಡುತ್ತಿದ್ದರು. ಅವರು ಕಾಂಗ್ರೆಸ್ ಮನಸ್ಥಿತಿಯಲ್ಲಿದ್ದರು ಎಂಬುದು ಸ್ಪಷ್ಟವಾಗುತ್ತದೆ.
ಆದಾದ ಬಳಿಕ ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿದ್ದ ದೇವೇಗೌಡರು ಪೆರೋಲ್ ಮೇಲೆ ಹೊರಗಡೆ ಬಂದರು. ಆಗ ಅಸಿಸ್ಟೆಂಟ್ ಕಮಿಷನರ್ ಆಗಿದ್ದ ಶಿವರಾಂ ಕೆಲಕಾಲ ನನ್ನ ಆಪ್ತ ಕಾರ್ಯದರ್ಶಿಯಾಗಿದ್ದರು. ಒಂದು ದಿನ ಶಿವರಾಂ ಅವರು ’ದೇವೇಗೌಡರು ನಿಮ್ಮನ್ನು ಖಾಸಗಿಯಾಗಿ ಭೇಟಿಯಾಗಬೇಕಂತೆ. ಒಂದೂವರೆಯಿಂದ ನಾಲ್ಕು ಗಂಟೆಯವರೆಗೆ ಯಾರೂ ಇರುವುದಿಲ್ಲ. ಎಲ್ಲ ಊಟಕ್ಕೆ ಹೋಗಿರುತ್ತಾರೆ, ಆವಾಗ ಬನ್ನಿ ಎಂದು ಗೌಡರಿಗೆ ಹೇಳಿದ್ದೇನೆ.’ ನಾನು ಕಾರಿನಲ್ಲಿ ಬರುವುದಿಲ್ಲ. ಆಟೋರಿಕ್ಷಾದಲ್ಲಿ ಬರುತ್ತೇನೆ ಎಂದು ಗೌಡರು ಹೇಳಿದ್ದಾರೆ’ ಎಂದು ತಿಳಿಸಿದರು.
ಆಟೋರಿಕ್ಷಾದಲ್ಲಿ ಮನೆಗೆ ಬಂದ ಗೌಡರು 'ಕೃಷ್ಣ ನನಗೆ ತುಂಬಾ ಬೇಜಾರಾಗಿದೆ. ವಿರೋಧ ಪಕ್ಷದಲ್ಲಿ ಒಗ್ಗಟ್ಟಿಲ್ಲ, ಒಂದು ನೀತಿಯಿಲ್ಲ. ನಾನು ಕಾಂಗ್ರೆಸ್ ಸೇರುವ ಮನಸ್ಸು ಮಾಡಿದ್ದೇನೆ' ಎಂದರು. ಆಗ ನಾನು ಮಾತನಾಡುತ್ತಾ 'ಈಗ ತಾನೇ ಮುಖ್ಯಮಂತ್ರಿ ದೇವರಾಜ ಅರಸ್ ವಿರುದ್ಧ 18 ಆಪಾದನೆ ಮಾಡಿ, ಇವುಗಳನ್ನು ನಾನು ಋಜುವಾತು ಮಾಡದೇ ಇದ್ದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುವುದಾಗಿ ಹೇಳಿದ್ದೀರಿ. ಈಗ ಕಾಂಗ್ರೆಸ್ ಬಂದರೆ ಜನಗಳ ಮುಂದೆ ನಿಮ್ಮ ಘನತೆ ಏನಾಗುತ್ತದೆ? ಅರಸ್ ಅವರನ್ನು ತೆಗೆದುಹಾಕಿ, ನಾವು ನಿಮ್ಮ ಜತೆಗೆ ಬರುತ್ತೇನೆ ಅಂಥ ಕಂಡೀಷನ್ ಹಾಕಿದರೆ ಅದಕ್ಕೊಂದು ಅರ್ಥವಿದೆ. ಆಗ ನೀವು ಕಾಂಗ್ರೆಸ್ ಸೇರಿದರೆ ನಿಮಗೆ ಘನತೆ ಬರುತ್ತದೆಯಲ್ಲವೇ' ಎಂದೆ ಸ್ವಲ್ಪ ಹೊತ್ತು ಮೌನಿಯಾದ ಗೌಡರು, 'ಕೃಷ್ಣ ನೀನು ಹೇಳುವುದರಲ್ಲೂ ಸತ್ಯ ಇದೆ. ನಾನು ಏಕಾಏಕಿ ದುಡುಕುವುದಿಲ್ಲ' ಎಂದರು.