ಉತ್ತರ ಪ್ರದೇಶ, ಡಿ 25 (Daijiworld News/MB): ಪೌರತ್ವ ವಿರೋಧಿ ಕಾಯ್ದೆ ಪ್ರತಿಭಟನೆಯ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿಯಿಂದ 14.86 ಲಕ್ಷ ರೂ.ಗಳ ನಷ್ಟ ಸಂಭವಿಸಿದ್ದು, ನಿಮ್ಮಿಂದಲೇ ಏಕೆ ವಸೂಲಿ ಮಾಡಬಾರದು ಎಂಬ ಬಗ್ಗೆ ವಿವರಣೆ ಕೋರಿ ಉತ್ತರ ಪ್ರದೇಶದ ರಾಂಪುರ್ ಜಿಲ್ಲಾಡಳಿತ ಮಂಗಳವಾರ 28 ಜನರಿಗೆ ನೋಟಿಸ್ ನೀಡಿದೆ.
ಪ್ರತಿಭಟನೆ ಹೆಸರಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡುವ ಪ್ರತಿಭಟನಾಕರರ ಆಸ್ತಿಯನ್ನು ಜಪ್ತಿ ಮಾಡಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಚ್ಚರಿಕೆ ಬಳಿಕ ಇದು ಮೊದಲ ಹೆಜ್ಜೆಯಾಗಿದೆ. ಸರ್ಕಾರಿ ಆಸ್ತಿಪಾಸ್ತಿಗಳಿಗೆ ಉಂಟಾದ ಹಾನಿಗಳನ್ನು ಸರಿದೂಗಿಸಲು ಇಂತಹ ಕ್ರಮ ಅನಿವಾರ್ಯ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಹಿಂದೆ ಎಚ್ಚರಿಕೆ ನೀಡಿದ್ದರು.
ಗಲಭೆಯನ್ನು ಸಿಸಿಟಿವಿ ದೃಶ್ಯವಾಳಿಗಳಿ ಹಾಗೂ ಛಾಯಾಚಿತ್ರಗಳನ್ನು ಆಧಾರಿಸಿ ಸ್ಥಳೀಯ ಪೊಲೀಸರು ನೀಡಿದ ಮಾಹಿತಿಯ ಆಧಾರದ ಮೇಲೆ ನೋಟಿಸ್ ನೀಡಲಾಗಿದೆ.
ಪೊಲೀಸ್ ಜೀಪ್, ಸಬ್ ಇನ್ಸ್ಪೆಕ್ಟರ್ನ ಮೋಟಾರ್ಸೈಕಲ್, ವೈರ್ಲೆಸ್ ಸೆಟ್ , ಬ್ಯಾರಿಕೇಡ್ , ಪೊಲೀಸರ ಲಾಠಿ ದ್ವಂಸ ಹಾಗೂ ಹಾನಿ ಮಾಡಿದ ನಿಟ್ಟಿನಲ್ಲಿ ಒಟ್ಟಾರೆ 14,86,500 ರೂ.ಗಳ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ ಎಂದು ನೊಟೀಸ್ ನಲ್ಲಿ ಉಲ್ಲೇಖಿಸಲಾಗಿದ್ದು ಈ ನೋಟಿಸ್ಗೆ ಉತ್ತರಿಸಲು ಒಂದು ವಾರದ ಗಡುವು ನೀಡಲಾಗಿದೆ.
2010 ರಲ್ಲಿ ಅಲಹಾಬಾದ್ ಹೈಕೋರ್ಟ್ ಗಲಭೆಯಿಂದಾಗಿ ಆದ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯ ನಷ್ಟವನ್ನು ಗಲಭೆ ಮಾಡಿದವರಿಂದಲ್ಲೇ ಪಡೆಯುವ ಅವಕಾಶ ನೀಡಿದ್ದು ಈ ತೀರ್ಮಾನವನ್ನು ಆಧರಿಸಿ ಗಲಭೆ ಮಾಡಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರಿಂದಲ್ಲೇ ಹಣ ವಸೂಲಿ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಯಿತು. ಡಿಸೆಂಬರ್ 19ರಂದು ಮುಖ್ಯಮಂತ್ರಿ ಆದಿತ್ಯನಾಥ್ ಅವರು "ಪ್ರಜಾಪ್ರಭುತ್ವದಲ್ಲಿ ಈ ರೀತಿಯ ಗಲಭೆಗೆ ಸ್ಥಾನವಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವ ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಎಡ ಪಕ್ಷಗಳು ದೇಶಕ್ಕೆ ಬೆಂಕಿಗೆ ತಳ್ಳುತ್ತಿದೆ. ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡುವವರ ಎಲ್ಲಾ ಆಸ್ತಿಯನ್ನು ವಶಪಡಿಸಿಕೊಳ್ಳಲಾಗುತ್ತದೆ ಮತ್ತು ನಷ್ಟವನ್ನು ಸರಿದೂಗಿಸಲು ಹರಾಜು ಮಾಡಲಾಗುತ್ತದೆ. ಹಾನಿ ಮಾಡಿದವರು ಕ್ಯಾಮೆರಾದಲ್ಲಿ ಸಿಕ್ಕಿ ಬಿದಿದ್ದಾರೆ ಎಂದು ಹೇಳಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ 28 ಜನರಿಗೆ ನೋಟಿಸ್ ನೀಡಲಾಗಿದ್ದು ಈ ಪೈಕಿ ಒಬ್ಬ ಕಸೂತಿ ಕೆಲಸಗಾರ ಮತ್ತು ಒಬ್ಬ ವ್ಯಾಪಾರಿ ಇದ್ದಾನೆ. ಸುಮಾರು 10 ದ್ವಿಚಕ್ರ ವಾಹನಗಳು ಮತ್ತು ಹಲವಾರು ಕಾರುಗಳಿಗೆ ಬೆಂಕಿ ಹಚ್ಚಲಾಗಿದ್ದು ಸಾರ್ವಜನಿಕ ಆಸ್ತಿಗೆ ಹಾನಿಯಾಗಿದೆ. ಈ ಗಲಭೆಯಲ್ಲಿ ಕನಿಷ್ಠ 30 ಮಂದಿ ಗಾಯಗೊಂಡಿದ್ದು ಆ ಪೈಕಿ 12 ಮಂದಿ ಪೊಲೀಸರು ಸಿಬ್ಬಂದಿಗಳು ಎಂದು ತಿಳಿದು ಬಂದಿದೆ.
ಈ ಕುರಿತು ಕಸೂತಿ ಕೆಲಸಗಾರ ಜಮೀರ್ ತಾಯಿ ಮುನ್ನಿ ಬೇಗಮ್ "ನಾನು ಈವರೆಗೂ ಯಾವುದೇ ಆಸ್ತಿ ಜಪ್ತಿ ನೋಟಿಸ್ ಪಡೆದಿಲ್ಲ. ಜಮೀರ್ ಪರ ವಕೀಲರನ್ನು ವ್ಯವಸ್ಥೆ ಮಾಡಲು ನಮ್ಮಲ್ಲಿ ಹಣವೂ ಇಲ್ಲ. ಹಾಗಿರುವಾಗ ನಾವು ಹೇಗೆ ಹಾನಿ ನಷ್ಟ ತುಂಬಲು ಸಾಧ್ಯ. ನನ್ನ ಮಗ ನಾಲ್ಕನೇ ತರಗತಿಯವರೆಗೆ ಮಾತ್ರ ಓದಿದ, ನಿರಪರಾಧಿ. ಹಿಂಸಾಚಾರದ ದಿನ ಅವನು ಮನೆಯಲ್ಲಿದ್ದ ಎಂದು ಹೇಳಿದ್ದಾರೆ.
ಜಮೀರ್ನ ನೆರೆ ಮನೆಯವನಾದ ವ್ಯಾಪಾರಿ ಮೆಹಮೂದ್ನನ್ನು ಕೂಡಾ ಭಾನುವಾರ ಬಂಧಿಸಲಾಗಿದೆ. ಆದರೆ ಹಿಂಸಾಚಾರದ ದಿನ ಮೆಹಮೂದ್ ಮನೆಯಲ್ಲಿಯೇ ಇದ್ದ. ಅವನು ಬಾಡಿಗೆ ಮನೆಯಲ್ಲಿರುವುದು, ಅಷ್ಟು ಮೊತ್ತವನ್ನು ಆತ ಹೇಗೆ ಕೊಡಲು ಸಾಧ್ಯ ಎಂದು ಮೆಹಮೂದ್ನ ಸೋದರ ಮಾವ ಹೇಳಿದ್ದಾರೆ.
ಇನ್ನೋರ್ವ ಕಾರ್ಮಿಕ ಪಪ್ಪುನನ್ನು ಕೂಡಾ ಪೊಲೀಸರು ಭಾನುವಾರ ಬಂಧಿಸಿದ್ದು ಆತನ ಪತ್ನಿ ಸೀಮಾ ಕೂಡಾ ಹಿಂಸಾಚಾರ ನಡೆದ ದಿನ ಆತ ಮನೆಯಲ್ಲಿದ್ದ ಎಂದು ಹೇಳಿದ್ದಾಳೆ. ಒಟ್ಟಾರೆಯಾಗಿ ಸಾರ್ವಿಜನಿಕ ಆಸ್ತಿಗೆ ಹಾನಿ ಮಾಡಿ ಆ ಭಾರೀ ಮೊತ್ತವನ್ನು ಪಾವತಿ ಮಾಡಬೇಕಾದ ಸಂದರ್ಭ ಬಂದಿರುವುದರಿಂದ ಆರೋಪಿಗಳ ಮನೆಯವರು ಸಂಕಟಕ್ಕೀಡಾಗಿದ್ದಾರೆ.
ಈ ಕುರಿತು ಪೊಲೀಸ್ ಅಧಿಕಾರಿಗಳು ಈಗಾಗಲೇ ನಾವು 28 ಜನರಲ್ಲಿ ಕೆಲವರನ್ನು ಬಂಧಿಸಿದ್ದೇವೆ. ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಹೇಳುವವರು ಸಾಕ್ಷಿ ಸಲ್ಲಿಸಬಹುದು" ಎಂದು ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ಆರ್ಸಿ ವಿರುದ್ಧ ರಾಷ್ಟ್ರವ್ಯಾಪ್ತಿಯಾಗಿ ಪ್ರತಿಭಟನೆಗಳು ನಡೆಯುತ್ತಿದ್ದು ಕಳೆದ 2 ವಾರಗಳಲ್ಲಿ ತೀವ್ರ ಗಲಭೆ ಸೃಷ್ಟಿಯಾಗಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಲಾಗಿದೆ. ಈ ಗಲಭೆಯಿಂದಾಗಿ ಉತ್ತರ ಪ್ರದೇಶದಲ್ಲಿಯೇ 17 ಜನರು ಸಾವನ್ನಪ್ಪಿದ್ದು ಒಟ್ಟು 24 ಜನರು ಮೃತಪಟ್ಟಿದ್ದಾರೆ.
ಈ ಗಲಭೆ ಸೃಷ್ಟಿಸಲಾಗುವುದು ಎಂಬ ಹಿನ್ನಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಲಖನೌ, ಕಾನ್ಪುರ್, ಅಲಹಾಬಾದ್, ಆಗ್ರಾ, ಗಾಜಿಯಾಬಾದ್, ವಾರಣಾಸಿ, ಮಥುರಾ, ಮೀರತ್, ಮೊರಾದಾಬಾದ್, ಮುಜಫರ್ನಗರ, ಬರೇಲಿ, ಫಿರೋಜಾಬಾದ್, ಪಿಲಿಭಿತ್, ರಾಂಪುರ್, ಸಹರಾನ್ಪುರ್, ಶಮ್ಲಿ, ಸಂಭಾಲ್, ಅಮ್ರಾಲ್ ಸೇರಿದಂತೆ ರಾಜ್ಯದ ಹಲವಾರು ನಗರಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.