ಪಾಟ್ನ, ಡಿ 25 (Daijiworld News/PY) : ದೇಶದ ಜನರನ್ನು ಬೆಚ್ಚಿ ಬೀಳಿಸಿದ ದೆಹಲಿಯ ನಿರ್ಭಯಾ ಪ್ರಕರಣ ಉನ್ನಾವೋ ಹಾಗೂ ಹೈದರಾಬಾದ್ನ ದಿಶಾ ಪ್ರಕರಣಗಳ ನೆನಪು ಮಾಸಿಹೋಗುವ ಮುನ್ನವೇ, ಬಿಹಾರದ ಪುರ್ನಿಯಾ ಜಿಲ್ಲೆಯಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ಮೂವರು ಬಾಲಕರು ಅತ್ಯಾಚಾರ ನಡೆಸಿದ ಘಟನೆ ಭಾನುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ನೆರೆಮನೆಗೆ ಟಿವಿ ನೋಡಲು ಹೋಗುತ್ತಿದ್ದ ಬಾಲಕಿಯನ್ನು 12-13 ವರ್ಷದ ನಡುವಿನ ಇಬ್ಬರು ಬಾಲಕರು ಭಾನುವಾರ ಅಪಹರಿಸಿದ್ದು, ಬಾಲಕಿ ಮನೆಗೆ ಮರಳಿ ಬಾರದಿರುವುದನ್ನು ತಿಳಿದ ಆಕೆಯ ಮನೆಯವರು ಹುಡುಕಾಟ ನಡೆಸಿದ್ದರಾದರೂ ಬಾಲಕಿ ಮಾತ್ರ ಪತ್ತೆಯಾಗಿಲ್ಲ.
ಸೋಮವಾರ ಬೆಳಗ್ಗೆ ಬಾಲಕಿಯ ಶವ ಅಡಿಕೆ ಅಂಗಡಿಯ ಬಳಿ ಪತ್ತೆಯಾಗಿದ್ದು , ಸ್ಥಳೀಯರ ಒತ್ತಾಯದ ಮೇರೆಗೆ ಮರಣೋತ್ತರ ಪರೀಕ್ಷೆ ನಡೆಸದೇ ಶವ ಸಂಸ್ಕಾರ ಮಾಡಲು ಧಾಮಾಧಾ ಪೊಲೀಸ್ ಠಾಣಾಧಿಕಾರಿ ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ.
ಇನ್ನೊಂದೆಡೆ ತಾನು ಹಾಗೂ ಇನ್ನಿಬ್ಬರು ಸೇರಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದೇವೆ ಎಂದು ಆರೋಪಿಗಳಲ್ಲಿ ಒಬ್ಬಾತ ತನ್ನ ಗೆಳೆಯನ ಬಳಿ ಹೇಳಿಕೊಂಡಿದ್ದು, ಆತ ಈ ವಿಷಯವನ್ನು ಎಲ್ಲೆಡೆ ತಿಳಿಸಿ ವಿಷಯವು ಬಹಿರಂಗವಾಗಿದೆ ಎಂದು ವರದಿಯೊಂದು ತಿಳಿಸಿದೆ.
ಈ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆಯೇ ಶಂಕಿತನನ್ನು ಸ್ಥಳಿಯರು ಥಳಿಸಿದ್ದಾರೆ. ಕೊನೆಗೂ ಇಬ್ಬರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿದ್ದಾನೆ ಈ ವಿಷಯ ತಿಳಿದ ಬಳಿಕ ಬಾಲಕಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವುದಾಗಿ ತಿಳಿದುಬಂದಿದೆ.
ಅತ್ಯಾಚಾರ ನಡೆಸಿದ ಮೂವರು ಆರೋಪಿಗಳಲ್ಲಿ ಇಬ್ಬರು ಅಪ್ರಾಪ್ತರಾಗಿದ್ದಾರೆ. ಇಬ್ಬರು ಆರೋಪಿಗಳನ್ನು ಬಾಲಾಪರಾಧಿ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಿದ್ದೇವೆ, ಬಳಿಕ ಇಬ್ಬರನ್ನೂನಿರ್ಬಂಧ ಗೃಹಕ್ಕೆ ಕಳುಹಿಸಲಾಗಿದೆ. ತಪ್ಪಿಸಿಕೊಂಡ ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಧಾಮಾಧಾ ಪೊಲೀಸ್ ಠಾಣಾಧಿಕಾರಿ ರಾಜ್ ಕಿಶೋರ್ ಶರ್ಮಾ ತಿಳಿಸಿದ್ದಾರೆ.