ಲಕ್ನೋ, ಡಿ 25 (Daijiworld News/PY) : ಅಯೋಧ್ಯೆಯಲ್ಲಿ ಇನ್ನು ನಾಲ್ಕು ತಿಂಗಳ ಕಾಲಾವಧಿಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ನೀಡಿದ ಹೇಳಿಕೆ ಬೆನ್ನಲ್ಲೇ, ಪಾಕಿಸ್ತಾನ ಮೂಲದ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯು ಅಯೋಧ್ಯೆಯ ಮೇಲೆ ಯಾವುದೇ ಕ್ಷಣದಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ದಳ ಎಚ್ಚರಿಸಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣವಾಗಲಿದೆ ಎಂಬ ವಿಚಾರವನ್ನು ತಿಳಿದ ಪಾಕಿಸ್ತಾನ ಮೂಲದ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರರು ಅಯೋಧ್ಯೆಯತ್ತ ಗಮನಹರಿಸಿದ್ದಾರೆ, ಆ ಕಾರಣ ಅಯೋಧ್ಯೆ, ಗೋರಖಪುರದಲ್ಲಿ ಉಗ್ರರು ನೆಲೆಸಿದ್ದಾರೆ ಎನ್ನುವ ಅನುಮಾನವಿದೆ, ಉಗ್ರರಿಗೆ ಸ್ಥಳೀಯರ ನೆರವು ಹಾಗೂ ಈ ಪ್ರದೇಶದಲ್ಲಿ ಸುಲಭವಾಗಿ ಸಂಚರಿಸಲು ಸಹಾಯ ದೊರೆತಿದ್ದು, ಶಸ್ತ್ರಾಸ್ತ್ರಗಳ ಸಂಗ್ರಹವನ್ನೂ ಮಾಡುತ್ತಿದ್ದಾರೆ ಎಂದು ಗುಪ್ತಚರ ದಳದ ಮಾಹಿತಿ ನೀಡಿದೆ.
ಅಯೋಧ್ಯೆಯತ್ತ ಕಾಲಿಟ್ಟ ಉಗ್ರ ಸಂಘಟನೆಯ ಜೆಇಎಂ ಮುಖ್ಯಸ್ಥ ಮಸೂದ್ ಅಜರ್, ಸಹಚರರಿಗೆ ಕರೆ ನೀಡಿ ದಾಳಿ ನಡೆಸುವಂತೆ ಸಂದೇಶ ರವಾನೆಯಾಗುತ್ತಿದೆ, ಭಾರತ-ನೇಪಾಳ ಗಡಿ ಭಾಗದ ಮೂಲಕ ಒಳನುಸುಳಲು ಪ್ರಯತ್ನಿಸಿ ಸೆರೆಯಾಗಿದ್ದ ಏಳು ಉಗ್ರರು ನೀಡಿರುವ ಮಾಹಿತಿ ಕೂಡ ಕಳವಳಕಾರಿಯಾದುದು. ಇದಕ್ಕೆ ಕುಮ್ಮಕ್ಕು ನೀಡುವ ವಿಡಿಯೋವೊಂದು ಟೆಲಿಗ್ರಾಂ ಆಪ್ ಮೂಲಕ ಹರಿದಾಡುತ್ತಿದೆ ಇದರಿಂದಾಗಿ ಅಯೋಧ್ಯೆಯಲ್ಲಿ ಪೊಲೀಸರು ಬಿಗಿಬಂದೋಬಸ್ತ್ ಏರ್ಪಡಿಸಿದ್ದಾರೆ ಎಂದು ವರದಿಯಾಗಿದೆ.