ನವದೆಹಲಿ, ಡಿ 25 (Daijiworld News/PY) : ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾರತದಲ್ಲಿರುವ ಬಂಧನ ಶಿಬಿರಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಿದ ಬಳಿಕ ಇದೀಗ ಎಲ್ಲಾ ರಾಜ್ಯಗಳಲ್ಲಿ 2009, 2012, 2014 ಮತ್ತು 2018ರಲ್ಲಿ ಬಂಧನ ಶಿಬಿರವನ್ನು ನಿರ್ಮಾಣ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು ಎಂದು ಕೇಂದ್ರ ಗೃಹ ಸಚಿವಾಲಯ ಬುಧವಾರ ತಿಳಿಸಿದೆ.
ಅಸ್ಸಾಂನ ಗೋಲಾಪಾರಾ, ಕೊಕ್ರಾಜಹಾರ್, ಸಿಲ್ಚಾರ್, ದಿಬ್ರುಗಢ್, ಜೋಹ್ರಾತ್ ಮತ್ತು ತೇಝ್ ಪುರ್ ಸೇರಿದಂತೆ ಆರು ಬಂಧನ ಶಿಬಿರಗಳಿವೆ. ಅಸ್ಸಾಂನ ಬಂಧನ ಶಿಬಿರದಲ್ಲಿ ಒಟ್ಟು 970 ಮಂದಿ ಇದ್ದಾರೆ. ಇದರಲ್ಲಿ 646 ಪುರುಷರು, 324 ಮಹಿಳೆಯರು ಸೇರಿದ್ದಾರೆ. ಮೂಲಭೂತ ಸೌಕರ್ಯ ಹಾಗೂ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಮಹಿಳೆಯರ ಮೇಲೆ ಅತ್ಯಾಚಾರ ನಡೆದ ಯಾವುದೇ ಪ್ರಕರಣಗಳ ಬಗ್ಗೆ ವರದಿಯಾಗಿಲ್ಲ. ಜನರಿಗೂ ಈ ಶಿಬಿರಗಳಿಗೆ ಭೇಟಿ ಕೊಡುವಂತ ಅವಕಾಶ ನೀಡಲಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳ ಪ್ರಕಾರ ತಿಳಿದು ಬಂದಿದೆ.
ಇದೀಗ ಕರ್ನಾಟಕದಲ್ಲಿಯೂ ಅಕ್ರಮವಾಗಿ ವಾಸಿಸುತ್ತಿರುವ ಸುಮಾರು 114 ಬಾಂಗ್ಲಾದೇಶಿಯರನ್ನು ಗುರುತಿಸಲಾಗಿದ್ದು, ಶೀಘ್ರವೇ ಬಂಧನ ಶಿಬಿರದ ಕೆಲಸಗಳನ್ನು ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಂಗಳವಾರ ಮಾತನಾಡಿದ ಅಮಿತ್ ಶಾ, ಬಂಧನ ಶಿಬಿರಕ್ಕೂ, ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ಸಿಎಎಗೂ ಯಾವುದೇ ರೀತಿಯ ಸಂಬಂಧ ಇಲ್ಲ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಲ್ಲಿಯವರೆಗೂ ಯಾವುದೇ ಬಂಧನ ಶಿಬಿರವನ್ನು ನಿರ್ಮಿಸಿಲ್ಲ, ಈ ವಿಚಾರವಾಗಿ ಸುಮ್ಮನೆ ಗಾಳಿಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ.