ನವದೆಹಲಿ, ಅ.28 (DaijiworldNews/AA): ವಿಧಾನ ಪರಿಷತ್ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟದ ನಾಲ್ಕೂ ಅಭ್ಯರ್ಥಿಗಳು ಜಯಭೇರಿ ಬಾರಿಸುವ ಮೂಲಕ ರಾಜ್ಯದ ಜನತೆ ಕಾಂಗ್ರೆಸ್ನ ದುರಾಡಳಿತಕ್ಕೆ ತಕ್ಕ ಉತ್ತರ ನೀಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಇದು ಜನವಿರೋಧಿ ಸರ್ಕಾರದ ವಿರುದ್ಧ ವ್ಯಕ್ತವಾಗಿರುವ ಸ್ಪಷ್ಟ ಜನಾದೇಶ. 2028ಕ್ಕೆ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ಅಹಂನಲ್ಲಿ ತೇಲುತ್ತಿದ್ದವರಿಗೆ ಜನತೆ ಕಪಾಳಮೋಕ್ಷ ಮಾಡಿದ್ದಾರೆ. ಮುಖ್ಯಮಂತ್ರಿಯವರ ಜನವಿರೋಧಿ ನೀತಿಗಳು ಮತ್ತು ಭ್ರಷ್ಟಾಚಾರ ರಹಿತ ಆಡಳಿತದ ಬಯಕೆಗೆ ಈ ಫಲಿತಾಂಶ ದಿಕ್ಸೂಚಿಯಾಗಿದೆ" ಎಂದರು.
"ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ, ದೇವೇಗೌಡರ ಮೇಲಿನ ಜನರ ಪ್ರೀತಿ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಯ ಸಮನ್ವಯತೆಯಿಂದ ಈ ಜಯ ಸಾಧ್ಯವಾಗಿದೆ. ಮೈತ್ರಿಯನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಜವಾಬ್ದಾರಿ ನಿಭಾಯಿಸಿದ ಆರ್. ಅಶೋಕ್ ಹಾಗೂ ಬಿ.ವೈ. ವಿಜಯೇಂದ್ರ ಅವರಿಗೆ ಅಭಿನಂದನೆಗಳು" ಎಂದು ಹೇಳಿದರು.
"ಸ್ಟಿಂಗ್ ಕಾರ್ಯಾಚರಣೆ ಮಾಡಿಸಿದ್ದು ಕಾಂಗ್ರೆಸ್ನ ಮಹಿಳಾ ನಾಯಕಿ. ಅವರಿಗೆ 2015ರ ಜೂನ್ನಲ್ಲಿ ಮಹಿಳಾ ಮತ್ತು ಮಕ್ಕಳ ಆಯೋಗದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಇದರಲ್ಲಿ ಮೂರನೇ ಮಹಿಳೆ ಹಾಗೂ ಖಾಸಗಿ ಚಾನೆಲ್ನ ವ್ಯಕ್ತಿಯ ಪಾತ್ರವೇನು? ತಾನೇ ಸ್ಟಿಂಗ್ ಮಾಡಿದ್ದೇನೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿರುವ ವ್ಯಕ್ತಿಯ ವಿರುದ್ಧ ಸರ್ಕಾರ ಇದುವರೆಗೆ ಯಾವ ಕ್ರಮ ಕೈಗೊಂಡಿದೆ? ಅವನಿಗೆ ಪೊಲೀಸ್ ಭದ್ರತೆ ಕೊಟ್ಟಿದ್ದು ಯಾರು? ಎಂದು ಪ್ರಶ್ನಿಸಿದರು.
"ಈ ಷಡ್ಯಂತ್ರ ನಡೆದಿರುವುದು ನನ್ನ ವಿರುದ್ಧವಲ್ಲ, ಬದಲಾಗಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ನಾಶಪಡಿಸಲು. ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗುವುದನ್ನು ಸಿದ್ದರಾಮಯ್ಯ ತಪ್ಪಿಸಿದ್ದರು ಎಂಬ ಆಕ್ರೋಶದಿಂದಲೇ ಅವರ ಆಪ್ತರೇ ಈ ಕೃತ್ಯ ಎಸಗಿದ್ದಾರೆ. 2023ರಲ್ಲೇ ಸಿದ್ಧಪಡಿಸಿದ ವಿಡಿಯೋವನ್ನು ಈಗ ಯಾಕೆ ತರಲಾಯಿತು? ಈ ಕುರಿತು ನಿಷ್ಪಕ್ಷಪಾತ ತನಿಖೆಯಾಗಬೇಕು" ಎಂದು ಆಗ್ರಹಿಸಿದರು.