ಬೆಂಗಳೂರು,ಅ.27 (DaijiworldNews/AK): ಮತಗಳ್ಳತನ ಕುರಿತ ಕಾಂಗ್ರೆಸ್ಸಿನ ಸುಳ್ಳನ್ನು ಪ್ರಜ್ಞಾವಂತ ಮತದಾರರು ವಿಧಾನಪರಿಷತ್ತಿನ ಚುನಾವಣಾ ಫಲಿತಾಂಶದ ಮೂಲಕ ತಿರಸ್ಕರಿಸಿರುವುದಕ್ಕೆ ಇದು ಜ್ವಲಂತ ಉದಾಹರಣೆ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶ್ಲೇಷಿಸಿದ್ದಾರೆ.

ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಖಜಾನೆ ಲೂಟಿ, ಹಗಲುದರೋಡೆ ಮಾಡಿ ಜನರಿಗೆ ದ್ರೋಹ ಮಾಡಿದ ಸರಕಾರ ಇದು. ಈ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಹಕ್ಕಿಲ್ಲ. ವಿಧಾನಪರಿಷತ್ತಿನ ಈ ಫಲಿತಾಂಶದ ಹಿನ್ನೆಲೆಯಲ್ಲಿ ಈ ಸರಕಾರವು ತಕ್ಷಣ ರಾಜೀನಾಮೆ ಕೊಡಬೇಕು. ಜನಾದೇಶ ಪಡೆಯೋಣ ಎಂದು ಸವಾಲು ಹಾಕಿದರು.
ಜನಾಕ್ರೋಶಕ್ಕೆ ಹಿಡಿದ ಕೈಗನ್ನಡಿ.
ಇದು ಮತಪತ್ರದ ಮೂಲಕ ನಡೆದ ಚುನಾವಣೆ. ಇವಿಎಂ ಮೂಲಕ ಈ ಚುನಾವಣೆ ನಡೆದಿಲ್ಲ. ಶಿಕ್ಷಕರು, ಪದವೀಧರ ಕ್ಷೇತ್ರಗಳ ಚುನಾವಣೆ ಎಂದರು. ಆಡಳಿತಾರೂಢ ಪಕ್ಷದ ವಿರುದ್ಧ ಎನ್ಡಿಎ ಸ್ಪರ್ಧಿಸಿ ಗೆದ್ದಿದೆ. ಜನರ ಮನಸ್ಸಿನಲ್ಲಿ ಕಾಂಗ್ರೆಸ್ ವಿರುದ್ಧ ಇರುವ ಆಕ್ರೋಶಕ್ಕೆ ಹಿಡಿದ ಒಂದು ಕೈಗನ್ನಡಿ ಎಂದು ನುಡಿದರು.
ಈ ಬಾರಿ ಮತದಾನದ ಪ್ರಮಾಣ ಹೆಚ್ಚಾಗಿದೆ
ಇದು ಆಡಳಿತವಿರೋಧಿ ಅಲೆ. ಕೆ.ಎಂ.ಸುರೇಶ್ ಅವರು 23 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ಸಂಕನೂರು ಅವರು 9 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಶಶೀಲ್ ನಮೋಶಿ ಅವರು 3 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ರಂಗನಾಥ್ ಅವರು 908 ಮತಗಳ ಅಂತರದಿಂದ ಗೆದ್ದಿದ್ದಾರೆ ಎಂದು ವಿವರಿಸಿದರು.
ಜನರು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದ ಸರಕಾರ
ಜನರ ಮನಸ್ಸಿನಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶವಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವು ರಾಜ್ಯದ 6 ಕೋಟಿ ಜನರು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ. ಅಭಿವೃದ್ಧಿ ಶೂನ್ಯತೆ ರಾಜ್ಯದಲ್ಲಿದೆ. ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ. ಇದು ಭ್ರಷ್ಟಾಚಾರ, ಹಗರಣಗಳ ಸರಕಾರ ಎಂದು ಆರೋಪಿಸಿದರು.