ಬೆಂಗಳೂರು, ಡಿ 25 (Daijiworld News/PY) : ಕನಕಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕನಕಪುರ-ಕೋಡಿಹಳ್ಳಿ ಮುಖ್ಯರಸ್ತೆಯ ನಾರಾಯಣಪುರ ಗ್ರಾಮ-ಅಂಕಚಾರಿ ದೊಡ್ಡಿ ಬಳಿ ಒಂಟಿ ಸಲಗವೊಂದು ಯುವಕರ ಗುಂಪಿನ ಮೇಲೆ ದಾಳಿ ಮಾಡಿ ಓರ್ವ ಯುವಕನನ್ನು ಕಾಲಿನಿಂದ ತುಳಿದು ಕೊಂದ ಘಟನೆ ಬುಧವಾರ ನಡೆದಿದೆ.
ಮೃತಪಟ್ಟವರನ್ನು ಕನಕಪುರದ ಬೇಕುಪ್ಪೆಯ ಹೊಂಬೇಗೌಡ ಎಂಬುವರ ಪುತ್ರ ಚೇತನ್ಕುಮಾರ್ (21) ಎಂದು ಗುರುತಿಸಲಾಗಿದೆ.
ಬುಧವಾರ ಸಂಜೆ ಚೇತನ್ ಕುಮಾರ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಕನಕಪುರ-ಕೋಡಿಹಳ್ಳಿ ಮುಖ್ಯರಸ್ತೆಯ ನಾರಾಯಣಪುರ ಗ್ರಾಮ-ಅಂಕಚಾರಿ ದೊಡ್ಡಿ ಬಳಿ ಮುಂಜಾನೆ ವಾಯುವಿಹಾರಕ್ಕೆ ತೆರಳುತ್ತಿದ್ದರು, ಆ ವೇಳೆ ಚೇತನ್ ಕುಮಾರ್ನ ಇಬ್ಬರು ಸ್ನೇಹಿತರು ಸ್ವಲ್ಪ ಮುಂದೆ ಹೋಗಿದ್ದು, ಚೇತನ್ಕುಮಾರ್ ನಿಧಾನವಾಗಿ ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ಒಂಟಿ ಸಲಗ ಎದುರಾಗಿದೆ. ಭಯಭೀತನಾದ ಚೇತನ್ ಸಹಾಯಕ್ಕಾಗಿ ಕೂಗಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಆನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಈ ಹಿಂದೆಯೂ ಒಂಟಿ ಸಲಗದ ದಾಳಿಗೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಅರಣ್ಯ ಇಲಾಖೆ ಕಾಡು ಪ್ರಾಣಿಗಳು ಗ್ರಾಮದೊಳಗೆ ಬರದಂತೆ ತಡೆಯಲು ವಿಫಲವಾಗಿದೆಎಂದು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಬನ್ನೇರುಘಟ್ಟ ರಾಷ್ಟ್ರೀಯ ಅರಣ್ಯ ಪ್ರದೇಶ ವ್ಯಾಪ್ತಿಯ ಬೆಟ್ಟಹಳ್ಳಿ ಕಾಡು ಮೂಲಕ ಆನೆಗಳು ನಾಡಿಗೆ ಬಂದು ತೊಂದರೆ ಕೊಡುತ್ತಿದ್ದು, ಅಪಾರ ಪ್ರಮಾಣದ ಬೆಳೆ ನಾಶ ಮಾಡುತ್ತಿದೆ. ಆದರೂ ಅರಣ್ಯ ಇಲಾಖೆ ಇದಕ್ಕೆ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಘಟನೆಯ ಬಗ್ಗೆ ಸುದ್ದಿ ತಿಳಿದ ಎಎಸ್ಪಿ ರಾಮರಾಜನ್, ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶ್, ಗ್ರಾಮಾಂತರ ಪೊಲೀಸರು, ಡಿಎಫ್ಒ ಸದಾಶಿವಯ್ಯ ಎನ್.ಹೆಗಡೆ, ಡಿಆರ್ಎಫ್ ದೇವರಾಜ್ ಅರಣ್ಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿ ಪ್ರತಿಭಟನಕಾರರ ಮನವೊಲಿಸಿ ಸರ್ಕಾರದಿಂದ ಹಾಗೂ ಅರಣ್ಯ ಇಲಾಖೆ ವತಿಯಿಂದ ದೊರಕಬಹುದಾದ ಪರಿಹಾರವನ್ನು ಮೃತನ ಕುಟುಂಬಕ್ಕೆ ಕೊಡಿಸುವುದಾಗಿ ಭರವಸೆ ನೀಡಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಬಳಿಕ ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.