ಬೆಂಗಳೂರು, ಅ.29 (DaijiworldNews/TA): ರಾಜ್ಯದ ಪ್ರತಿಷ್ಠಿತ ಪಾರಂಪರಿಕ ಚಿನ್ನಾಭರಣ ಸಂಸ್ಥೆಗಳಲ್ಲಿ ಒಂದಾದ ‘ಆಭರಣ’ದ ಸಂಸ್ಥಾಪಕ ಬುರ್ಡೆ ಸದಾನಂದ ಕಾಮತ್ ಅವರ 125ನೇ ಜನ್ಮ ವರ್ಷಾಚರಣೆಯ ಸ್ಮರಣಾರ್ಥ ವಿಶೇಷವಾಗಿ ವಿನ್ಯಾಸಗೊಳಿಸಲಾದ ಚಿನ್ನದ ನಾಣ್ಯವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರತಾಪ್ ಮಧುಕರ್ ಕಾಮತ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪ್ರದರ್ಶಿಸಿದರು.

ಬೆಂಗಳೂರಿನ ಸದಾಶಿವನಗರದಲ್ಲಿರುವ ಮುಖ್ಯಮಂತ್ರಿಗಳ ನಿವಾಸದಲ್ಲಿ ಭೇಟಿಯಾದ ಸಂದರ್ಭದಲ್ಲಿ ಡಾ. ಪ್ರತಾಪ್ ಮಧುಕರ್ ಕಾಮತ್ ಅವರು ಸ್ಮರಣಾರ್ಥ ನಾಣ್ಯವನ್ನು ಸಿಎಂಗೆ ಪರಿಚಯಿಸಿದರು.
ಈ ವೇಳೆ ನಡೆದ ಸೌಹಾರ್ದಯುತ ಮಾತುಕತೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಭರಣ ಕುಟುಂಬದೊಂದಿಗಿನ ತಮ್ಮ ದೀರ್ಘಕಾಲದ ಆತ್ಮೀಯ ಸಂಬಂಧವನ್ನು ಸ್ಮರಿಸಿದರು. ಸ್ಮರಣಾರ್ಥ ನಾಣ್ಯದ ಆಕರ್ಷಕ ವಿನ್ಯಾಸ ಮತ್ತು ಸೂಕ್ಷ್ಮ ಕಲಾಕೌಶಲವನ್ನು ಮೆಚ್ಚಿಕೊಂಡ ಅವರು, ಡಾ. ಪ್ರತಾಪ್ ಮಧುಕರ್ ಕಾಮತ್ ಅವರ ಮುಂದಿನ ಎಲ್ಲ ಯೋಜನೆಗಳಿಗೂ ಶುಭ ಹಾರೈಸಿದರು.
ಆಭರಣ ಸಂಸ್ಥೆಯ ಸಂಸ್ಥಾಪಕ ದಿವಂಗತ ಬುರ್ಡೆ ಸದಾನಂದ ಕಾಮತ್ ಅವರ 125ನೇ ಜನ್ಮ ವರ್ಷಾಚರಣೆಯ ಅಂಗವಾಗಿ, ಇತ್ತೀಚೆಗೆ ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಆಭರಣ ಮಳಿಗೆಯಲ್ಲಿ 4 ಗ್ರಾಂ ತೂಕದ ವಿಶೇಷ ವಿನ್ಯಾಸದ ಚಿನ್ನದ ನಾಣ್ಯವನ್ನು ಅನಾವರಣಗೊಳಿಸಲಾಗಿತ್ತು.
1901ರಲ್ಲಿ ಜನಿಸಿದ ಬುರ್ಡೆ ಸದಾನಂದ ಕಾಮತ್ ಅವರು 1935ರಲ್ಲಿ ಉಡುಪಿಯಲ್ಲಿ ‘ನಿಯೋ ಜ್ಯುವೆಲ್ಲರಿ ಮಾರ್ಟ್’ ಹೆಸರಿನಲ್ಲಿ ತಮ್ಮ ಮೊದಲ ಚಿನ್ನಾಭರಣ ಮಳಿಗೆಯನ್ನು ಸ್ಥಾಪಿಸಿದ್ದರು. ಈ ಮೂಲಕ ಒಂಬತ್ತು ದಶಕಗಳಿಗೂ ಮೀರಿದ ಕುಟುಂಬದ ಚಿನ್ನಾಭರಣ ಉದ್ಯಮದ ಪರಂಪರೆಗೆ ಅಡಿಪಾಯ ಹಾಕಿದರು.
ನಂತರ ಅವರ ಪುತ್ರ ಮಧುಕರ್ ಸದಾನಂದ ಕಾಮತ್ ಅವರು ‘ಆಭರಣ’ ಹೆಸರಿನಲ್ಲಿ ಉದ್ಯಮವನ್ನು ವಿಸ್ತರಿಸಿದರು. 1983ರಲ್ಲಿ ಬೆಂಗಳೂರಿನಲ್ಲಿ ಸಂಸ್ಥೆಯ ಕಾರ್ಯಾಚರಣೆಯನ್ನು ಆರಂಭಿಸಿದರು. ಪ್ರಸ್ತುತ ಆಭರಣ ಸಂಸ್ಥೆಯು ಬೆಂಗಳೂರಿನಲ್ಲಿ ನಾಲ್ಕು ಮಳಿಗೆಗಳನ್ನು ಹೊಂದಿದ್ದು, ತಾಜ್ ವೆಸ್ಟ್ ಎಂಡ್ನಲ್ಲಿರುವ ರೋಲೆಕ್ಸ್ ಬೂಟಿಕ್ ಕೂಡ ಸಂಸ್ಥೆಯ ಭಾಗವಾಗಿದೆ.