ರಾಯಚೂರು, ಡಿ.26 (Daijiworld News/MSP): ನನಗೆ ಡಿಸಿಎಂ ಹುದ್ದೆ ನೀಡಬೇಕು ಎನ್ನುವುದ ಜನರ ಅಭಿಪ್ರಾಯವಾಗಿದೆ. ಹೀಗಾಗಿ ಅದನ್ನು ನಾನು ತಿರಸ್ಕಾರ ಮಾಡುವಂತಿಲ್ಲ. ಮಾತ್ರವಲ್ಲದೆ ಜನರ ಆಗ್ರಹದಂತೆ ವಾಲ್ಮೀಕಿ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ, ನಾನು ಸೇರಿದಂತೆ ಸಮುದಾಯದ ಎಲ್ಲ ಶಾಸಕರು ರಾಜೀನಾಮೆ ನೀಡಲು ಸಿದ್ದವಿರುವುದಾಗಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ರಾಯಚೂರಿನ ಸಿಂಧನೂರಿನಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು ಅವರು, ನನಗೆ ಡಿಸಿಎಂ ಹುದ್ದೆ ನೀಡುವ ಕುರಿತು ಪಕ್ಷ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ವಾಲ್ಮೀಕಿ ಸಮುದಾಯಕ್ಕೆ ಒಂದು ಡಿಸಿಎಂ ಹುದ್ದೆ ಕೊಡದಿದ್ದರೆ ವಾಲ್ಮೀಕಿ ಸಮುದಾಯದ ಸ್ವಾಮೀಜಿ ಹೇಳಿದ ಹಾಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ ಎಂದು ತಿಳಿಸಿದರು.
ಡಿಸಿಎಂ ಹುದ್ದೆಯನ್ನು ರಮೇಶ್ ಜಾರಕಿಹೊಳಿ ಸೇರಿದಂತೆ ಸಮುದಾಯದ ಯಾರಿಗಾದರೂ ಕೊಟ್ಟರೂ ಸ್ವಾಗತಿಸಿತ್ತೇನೆ. ನನಗೆ ನೀಡಬೇಕು ಅಂತೆನಿಲ್ಲ, ಆದರೆ ನನಗೆ ಡಿಸಿಎಂ ಹುದ್ದೆ ನೀಡಬೇಕು ಎಂಬುದು ಅಭಿಮಾನಿಗಳ, ಕಾರ್ಯಕರ್ತರ ಅಭಿಪ್ರಾಯವಾಗಿದೆ ಎಂದರು.