ನವದೆಹಲಿ, ಡಿ 26 (Daijiworld News/PY) : ದೆಹಲಿಯಲ್ಲಿ ನಡೆಯುತ್ತಿದ್ದ ನಕಲಿ ನೋಟುಗಳ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದು, ಖಚಿತ ಮಾಹಿತಿಯ ಆಧಾರದ ಮೇಲೆ ದೆಹಲಿಯ ವಿಶೇಷ ಪೊಲೀಸ್ ತಂಡ ದಾಳಿ ನಡೆಸಿ 5 ಮಂದಿಯನ್ನು ಬಂಧಿಸಿದ್ಧಾರೆ ಎಂದು ತಿಳಿದುಬಂದಿದೆ.
ಈ ತಂಡವು, ಭಾರತೀಯ ನಕಲಿ ನೋಟುಗಳನ್ನು ಮುದ್ರಿಸಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಬಂಧಿತರಿಂದ ಲ್ಯಾಪ್ ಟಾಪ್, ಪ್ರಿಂಟಿಂಗ್ ಯಂತ್ರ ಹಾಗೂ 2000 ಸಾವಿರ ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಅಲ್ಲದೇ ಬಂಧಿತ ಗ್ಯಾಂಗ್ನಿಂದ ಅಮೆರಿಕದ ನಕಲಿ ನೋಟುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ನಕಲಿ ನೋಟು ಜಾಲದ ಕಿಂಗ್ ಪಿನ್ ತಬ್ರೇಜ್ ಲಾಂಗ್ಡಾ, ಜಾಲದ ಮುಖ್ಯ ಸೂತ್ರಧಾರಿ ಶೋಯಬ್ ಮಲಿಕ್, ಗ್ರಾಫಿಕ್ ಡಿಸೈನರ್ ದಿನೇಶ್ ಮಲಿಕ್, ದಿಲ್ಲಿ ಹಿಂದೂ ಕಾಲೇಜು ವಿದ್ಯಾರ್ಥಿ ಉಮ್ರಾನ್ ಅಮ್ರೋಹಿ ಹಾಗೂ ರಘುರಾಜ್ ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.