ಬೆಂಗಳೂರು, ಡಿ 27 (Daijiworld News/MB) : "ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರ ಆಸ್ತಿಯನ್ನು ಉತ್ತರ ಪ್ರದೇಶ ಮಾದರಿಯಲ್ಲಿ ಜಪ್ತಿ ಮಾಡಲಾಗುವುದು" ಎಂದು ಕಂದಾಯ ಸಚಿವ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, "ಪೌರತ್ವ ಕಾಯ್ದೆ ಕಡ್ಡಾಯವಾಗಿ ಜಾರಿ ಮಾಡಲಾಗುವುದು. ಕೇಂದ್ರದ ಸರಕಾರ ಜಾರಿಗೆ ತಂದಿರುವ ಈ ನೆಲದ ಕಾನೂನಿಗೆ ಗೌರವ ನೀಡುವುದು ಎಲ್ಲರ ಕರ್ತವ್ಯ. ಈ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುವಾಗ ಸಾರ್ವಜನಿಕ ಆಸ್ತಿಗೆ ನಷ್ಟ ಮಾಡಿದರೆ ಸುಮ್ಮನೆ ನೋಡಿಕೊಂಡು ಇರಲು ಸಾಧ್ಯವಿಲ್ಲ. ರಾಜ್ಯದಲ್ಲೂ ಕಠಿನ ಕಾನೂನು ತರಬೇಕಾಗುತ್ತದೆ" ಎಂದು ಹೇಳಿದ್ದಾರೆ.
"ಕೇಂದ್ರ ಸರಕಾರ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಸರಿಯಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಇನ್ನತರ ಕಡೆಗಳಿಂದ ಬಂದವರಿಗೆ ಆಶ್ರಯ ನೀಡೋಕೆ ಭಾರತ ದೇಶ ಧರ್ಮಛತ್ರವಲ್ಲ" ಎಂದು ಆಕ್ರೋಶ ವ್ಯಕ್ತಿ ಪಡಿಸಿದರು.
ಈ ಸಂದರ್ಭದಲ್ಲೇ "ಸೂರ್ಯಗ್ರಹಣ ಕುರಿತು ಮೂಢನಂಬಿಕೆ ಇರಬಾರದು. ಸಂಪ್ರದಾಯ ವಿಜ್ಞಾನ ಎರಡರ ಮೇಲೂ ನಂಬಿಕೆ ಇಟ್ಟಿದ್ದೇನೆ. ಸೂರ್ಯಗ್ರಹಣ ಇದ್ದರೂ ಬೆಳಗ್ಗೆ ಮನೆಯಲ್ಲೇ ಪೂಜೆ ಮಾಡಿ ಕಚೇರಿ ಕೆಲನ ಮಾಡುತ್ತದ್ದೇನೆ. ಯಾವುದೇ ಹೋಮ-ಹವನವನ್ನು ನನ್ನ ಕಚೇರಿಯಲ್ಲಿ ಮಾಡುವುದಿಲ್ಲ" ಎಂದು ಸ್ಪಷ್ಟನೆ ನೀಡಿದರು.