ಹುಬ್ಬಳ್ಳಿ, ಡಿ 27 (Daijiworld News/MB) : "ಪ್ರಧಾನಿ ನರೇಂದ್ರ ಮೋದಿ ಆಧುನಿಕ ಭಸ್ಮಾಸುರ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಆದರೆ ಈಗ ಇರುವ ಉದ್ಯೋಗವೂ ಉಳಿಯುತ್ತಿಲ್ಲ" ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಟೀಕೆ ಮಾಡಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೇಂದ್ರ ಸರಕಾರ ತನ್ನ ವಿವಿಧ ವೈಫಲ್ಯಗಳನ್ನು ಮರೆಮಾಚುವ ನಿಟ್ಟಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿಯಂತಹ ಭಾವನಾತ್ಮಕ ವಿಚಾರಗಳನ್ನು ಜನರ ಮುಂದೆ ಇಡುತ್ತಿದೆ" ಎಂದು ಆರೋಪಿಸಿದ್ದಾರೆ.
"ಕೇಂದ್ರದ ವೈಫಲ್ಯಗಳಾದ ಕಪ್ಪು ಹಣ ತರುವ ವಿಚಾರ, ಉದ್ಯೋಗ ಸೃಷ್ಟಿ ಹಾಗೂ ದೇಶದಲ್ಲಿನ ಆರ್ಥಿಕ ಅಧಃಪತನವನ್ನು ಜನರಿಂದ ಮುಚ್ಚಿ ಕೊಳ್ಳುವ ಉದ್ದೇಶದಿಂದ ಇಂತಹ ಕಾಯ್ದೆಗಳನ್ನು ಜನರ ಮುಂದಿಡುತ್ತಿದೆ" ಎಂದು ದೂರಿದರು.
"ಭಷ್ಟಾಚಾರ ತಡೆಯುತ್ತೇವೆ ಎಂದು ಹೇಳಿದ ಕೆಂದ್ರ ಈಗ ಭ್ರಷ್ಟಾಚಾರ ನಿಗ್ರಹ ಮಾಡುವಲ್ಲಿಯೂ ವಿಫಲವಾಗಿದೆ. ಬಿಜೆಪಿಯ ರಾಜ್ಯಸಭೆ ಸದಸ್ಯ ಸುಬ್ರಮಣ್ಯಂ ಸ್ವಾಮಿಯವರೇ ಬಿಜೆಪಿ ಸರಕಾರ ದೇಶದ ಆರ್ಥಿಕ ಕುಸಿತವನ್ನು ಸರಿಮಾಡದಿದ್ದರೆ ದೇಶ ಮುಂದೊಂದು ದಿನ ಬಿಜೆಪಿ ಮುಕ್ತ ದೇಶವಾಗುತ್ತದೆ ಎಂದು ಹೇಳಿದ್ದಾರೆ. ರೂಪಾಯಿ ಮೌಲ್ಯವು ಡಾಲರ್ ಎದುರು ಕುಸಿತ ಕಾಣುತ್ತಿದೆ. ಮೋದಿ ಹಾಗೂ ಅಮಿತ್ ಶಾ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸದೆ ಜನರ ದಾರಿಯನ್ನು ತಪ್ಪಿಸುತ್ತಿದ್ದಾರೆ" ಎಂದು ಆರೋಪ ಮಾಡಿದರು.