ಉತ್ತರಪ್ರದೇಶ, ಡಿ 27 (Daijiworld News/MSP): ಪ್ರತಿಭಟನೆ ,ರ್ಯಾಲಿ ಸಂದರ್ಭಗಳಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರೆ ತಪ್ಪಿತಸ್ಥರ ಆಸ್ತಿ ಜಪ್ತಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಿರುಗೇಟು ನೀಡಿದ್ದಾರೆ.
" ಸಿಎಎ ವಿರೋಧಿ ಪ್ರತಿಭಟನೆ ಸಂದರ್ಭ ಪೊಲೀಸರಿಂದ ಖಾಸಗಿ ಆಸ್ತಿ- ಪಾಸ್ತಿಗಳಿಗೆ ಹಾನಿ ಉಂಟುಮಾಡಿದ್ದು ಈ ಹಿನ್ನಲೆಯಲ್ಲಿ ಪೊಲೀಸರ ವಿರುದ್ದ ತನಿಖೆ ಹಾಗೂ ಆಸ್ತಿ ಹಾನಿಗಾಗಿ ಸರ್ಕಾರ ತಕ್ಷಣ ಪರಿಹಾರ್ ಘೋಷಿಸುವಂತೆ ಯಾದವ್ ಆಗ್ರಹಿಸಿದ್ದಾರೆ.
ಸಮಾಜವಾದಿ ಪಕ್ಷದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಯಾದವ್, "ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಳ್ಳುವ ನೆಪದಲ್ಲಿ ಯೋಗಿ ನೇತೃತ್ವದ ಬಿಜೆಪಿ ಸರ್ಕಾರವು ಇಲ್ಲಿನ ಜನರಲ್ಲಿ ಭಯ ಹುಟ್ಟುಹಾಕಲು ಮತ್ತು ಸಮಾಜವನ್ನು ವಿಭಜನೆಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದೆ" ಎಂದು ಆರೋಪಿಸಿದರು.
" ಪೊಲೀಸರು ಮನೆಗಳನ್ನು ದರೋಡೆ ಮಾಡುವುದು, ಸಿಸಿಟಿವಿ ಕ್ಯಾಮೆರಾಗಳನ್ನು ಒಡೆಯುವುದು ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತದೆ. ಹೀಗಾಗಿ ರಾಜ್ಯ ಸರ್ಕಾರ ಯಾವಾಗ ಪೊಲೀಸರ ವಿರುದ್ದ ತನಿಖೆ ನಡೆಸುತ್ತದೆ ಮತ್ತು ಆಸ್ತಿ ಪಾಸ್ತಿ ಹಾನಿಯಾಗದ ಜನರಿಗೆ ಪರಿಹಾರಕ್ಕಾಗಿ ಯಾವಾಗ ಆದೇಶಿಸುತ್ತದೆ?" ಎಂದು ಅವರು ಪ್ರಶ್ನಿಸಿದ್ದಾರೆ.
"ಅಸ್ಸಾಂನಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆದವು, ಅಲ್ಲಿ ಪ್ರತಿಭಟನೆ ಸಂದರ್ಭ ಭದ್ರತಾ ಪಡೆಗಳ ನಿಯೋಜಿಸಲಾಗಿತ್ತು, ಆದರೆ ಉತ್ತರ ಪ್ರದೇಶಕ್ಕೆ ಹೋಲಿಸಿದ್ರೆ ಸಾವಿನ ಸಂಖ್ಯೆ ತುಲನಾತ್ಮಕವಾಗಿ ಕಡಿಮೆ ಇದೆ. ಇಲ್ಲಿ ಅತಿ ಹೆಚ್ಚು ಸಾವುಗಳಾಗಿರುವ ಬಗ್ಗೆ ವರದಿಯಾಗಿವೆ. ಮುಖ್ಯಮಂತ್ರಿ ಯೋಗಿ ಅವರ ಪ್ರತೀಕಾರದ ಮನೋಭಾವದಿಂದ ಯುಪಿ ಯಲ್ಲಿ ಅತಿ ಹೆಚ್ಚಿನ ಸಾವು ಸಂಭವಿಸಿದೆ" ಎಂದು ದೂರಿದರು.